ಬೆಂಗಳೂರು:''ರಾಜ್ಯ ಬಿಜೆಪಿ ಸರಕಾರವು ದಲಿತರ ಏಳ್ಗೆಯ ಗುರಿಯೊಂದಿಗೆ ಮೀಸಲಾತಿಯನ್ನು ಹೆಚ್ಚಿಸಿದ್ದು, ಒಳಮೀಸಲಾತಿಯನ್ನೂ ಜಾರಿಗೆ ತಂದಿದೆ. ಇಂತಹ ಇಚ್ಛಾಶಕ್ತಿಯನ್ನು ಕಾಂಗ್ರೆಸ್ಸಾಗಲೀ, ಜೆಡಿಎಸ್ ಆಗಲೀ ಪ್ರದರ್ಶಿಸಿಲ್ಲ. ಒಳಮೀಸಲಾತಿಯನ್ನು ಕೊಡಲು ಆ ಪಕ್ಷಗಳಿಗೆ ಭಯವಿತ್ತು. ಈ ಮೂಲಕ ಬಿಜೆಪಿ ಸರಕಾರವು ಹೊಸ ಚರಿತ್ರೆ ಸೃಷ್ಟಿಸಿದ್ದು, ಇದು ಇಡೀ ದೇಶಕ್ಕೆ ಮಾದರಿ'' ಎಂದು ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಬಣ್ಣಿಸಿದ್ದಾರೆ.
ಅಂಬೇಡ್ಕರ್ ಜಯಂತಿ ದಿನವಾದ ಇಂದು ಯಶವಂತಪುರದ ಸಂವಿಧಾನ ವೃತ್ತದಲ್ಲಿರುವ ಪ್ರತಿಮೆಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮತ್ತು ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾಲಾರ್ಪಣೆ ಮಾಡಿದರು. ನಂತರ ಸಮೀಪದ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅಶ್ವತ್ಥನಾರಾಯಣ, ''ಮೀಸಲಾತಿ ಪರಿಷ್ಕರಣೆ ಮತ್ತು ಒಳಮೀಸಲಾತಿ ಎರಡನ್ನೂ ಜನಸಂಖ್ಯೆಯ ಪ್ರಮಾಣವನ್ನು ಆಧರಿಸಿ ಜಾರಿಗೊಳಿಸಲಾಗಿದೆ. ಇದಕ್ಕೆ ಯಾವುದೇ ತೊಡಕು ಎದುರಾಗದಂತೆ 9ನೇ ಷೆಡ್ಯೂಲ್‌ಗೆ ಸೇರಿಸಲಾಗುತ್ತಿದೆ. ಇದರಿಂದ ದಲಿತ ಸಮುದಾಯಗಳಿಗೆ ಶಿಕ್ಷಣ ಮತ್ತು ಉದ್ಯೋಗಗಳ ಪ್ರಯೋಜನ ಸಿಗಲಿದೆ. ಇದನ್ನು ಕಂಡು ಪ್ರತಿಪಕ್ಷಗಳಿಗೆ ನಡುಕ ಉಂಟಾಗಿದ್ದು, ಅವು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿವೆ. ನಮ್ಮ ಸರಕಾರವು ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಒಟ್ಟು ಶೇ.24ರಷ್ಟು ಮೀಸಲಾತಿ ಕೊಟ್ಟಿದೆ'' ಎಂದರು.
10 ಪುಣ್ಯಸ್ಥಳಗಳ ಅಭಿವೃದ್ಧಿ:ದೇಶದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೂ ಸೂಕ್ತ ಮೀಸಲಾತಿ ಕೊಡಲಾಗಿದೆ. ಇದನ್ನು ಸುಪ್ರೀಂ ಕೋರ್ಟ್ ಕೂಡ ಎತ್ತಿ ಹಿಡಿದಿದೆ. ದೇಶದಲ್ಲಿ ಇಂದು ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ಜನಪರವಾಗಿ ಕೆಲಸ ಮಾಡುತ್ತಿದ್ದರೆ ಅದರ ಹಿಂದೆ ಸಂವಿಧಾನದ ಜನಕರಾದ ಬಾಬಾಸಾಹೇಬ್ ಅಂಬೇಡ್ಕರ್ ಅವರೇ ಮೂಲಕಾರಣರಾಗಿದ್ದಾರೆ. ಅವರ ದೂರದರ್ಶಿತ್ವದಿಂದಾಗಿ 140 ಕೋಟಿ ದೇಶವಾಸಿಗಳು ನೆಮ್ಮದಿಯ ಬದುಕು ನಡೆಸುತ್ತಿದ್ದಾರೆ. ಜೊತೆಗೆ ರಾಜ್ಯದಲ್ಲಿ ಅವರು ಭೇಟಿ ನೀಡಿದ್ದ 10 ಸ್ಥಳಗಳನ್ನು ಪುಣ್ಯಕ್ಷೇತ್ರಗಳಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ'' ಎಂದು ಅವರು ಅಭಿಪ್ರಾಯಪಟ್ಟರು.