ಕರ್ನಾಟಕ

karnataka

By

Published : Jul 22, 2021, 6:55 AM IST

Updated : Jul 22, 2021, 10:04 AM IST

ETV Bharat / state

ದೊಡ್ಡಬಳ್ಳಾಪುರದಲ್ಲಿ 600 ವರ್ಷಗಳಿಂದ ಆಚರಿಸಲಾಗ್ತಿದೆ ಭೂತ ನೆರಿಗೆ ಹಬ್ಬ! ಏನಿದರ ವಿಶೇಷ?

ತೂಬಗೆರೆ ಗ್ರಾಮದಲ್ಲಿ 600 ವರ್ಷಗಳಿಂದ ಭೂತ ನೆರಿಗೆ ಎಂಬ ಹಬ್ಬ ಆಚರಿಸಿಕೊಂಡು ಬರಲಾಗ್ತಿದೆ. ಕರಿಯಣ್ಣ - ಕೆಂಚಣ್ಣರ ವೇಷಧಾರಿಯಾದವರ ಮೇಲೆ ಭೂತ ಆಹ್ವಾನಿಸಿ, ಆರ್ಭಟಿಸುತ್ತವೆ. ಈ ವೇಳೆ, ಇವರ ಹಸಿವು ತಣಿಸುವ ಕೆಲಸ ಆಗುತ್ತದೆ. ವೇಷಧಾರಿಗಳು ಮನೆಗೆ ಬಂದರೆ ಮನೆಯಲ್ಲಿನ ದ್ವೆವ್ವ ಪಿಶಾಚಿಗಳು ಓಡಿ ಹೋಗುತ್ತವೆ ಎಂಬ ನಂಬಿಕೆಯೂ ಇದೆ.

bhootanerige celebration
ಭೂತನೆರಿಗೆ ಆಚರಣೆ

ದೊಡ್ಡಬಳ್ಳಾಪುರ: 600 ವರ್ಷಗಳಿಂದ ಭೂತನೆರಿಗೆ ಎಂಬ ಹಬ್ಬವನ್ನು ತಾಲೂಕಿನ ತೂಬಗೆರೆ ಗ್ರಾಮಸ್ಥರು ಆಚರಿಸಿಕೊಂಡು ಬಂದಿದ್ದಾರೆ. ಕರಿಯಣ್ಣ ಕೆಂಚಣ್ಣರ ಮೇಲೆ ಭೂತಗಳು ಆಹ್ವಾನಿಸುತ್ತದೆ ಎಂಬುದು ಇಲ್ಲಿನ ಜನರ ನಂಬಿಕೆ. ಅದು ಜನರ ಮೇಲೆ ಮುಗಿ ಬೀಳುತ್ತದೆ. ಭೂತಗಳ ಆರ್ಭಟಕ್ಕೆ ಹೆದರಿ ಓಡುವವರು, ಜತೆಗೆ ದೂರದಲ್ಲಿ ನಿಂತು ನೋಡುವ ಜನರು ಹಬ್ಬದ ಮನರಂಜನೆಯನ್ನ ಸವಿಯುತ್ತಾರೆ.

ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಗ್ರಾಮದಲ್ಲಿ ಪ್ರತಿ ವರ್ಷದಂತೆ ಭೂತನೆರಿಗೆ ಹಬ್ಬವನ್ನು ಆಚರಿಸಲಾಯ್ತು. 600 ವರ್ಷಗಳ ಇತಿಹಾಸವಿರುವ ಭೂತನೆರಿಗೆ ಆಚರಣೆಯಲ್ಲಿ ಪ್ರಮುಖ ಆಕರ್ಷಣೆ ಕೆಂಚಣ್ಣ ಮತ್ತು ಕರಿಯಣ್ಣ. ಕೈಯಲ್ಲಿ ಖಡ್ಗ, ಗುರಾಣಿ ಹಿಡಿದಿರುವ ಇವರು ಹಸಿವಿನಿಂದ ಆಕ್ರೋಶಗೊಂಡಿರುತ್ತಾರೆ. ಇವರ ಹಸಿವು ತಣಿಸಲು ಹಲಸು ಮತ್ತು ಬಾಳೇ ಹಣ್ಣಿನ ರಸಾಯನ ಕೊಡಲಾಗುತ್ತದೆ. ಕೋಳಿಗಳನ್ನು ಸಹ ನೀಡಲಾಗುತ್ತೆ.

ಭೂತ ನೆರಿಗೆ ಹಬ್ಬ

ಇವರಿಬ್ಬರ ಮೇಲೆ ಭೂತಗಳ ಅಹ್ವಾಹನೆಯಾಗಿ, ಜನರನ್ನು ಅಟ್ಟಾಡಿಸಿಕೊಂಡು ಹೋಗುತ್ತವೆ. ಯುವಕರು ರೇಗಿಸಿ ಮನರಂಜನೆ ಪಡೆಯುತ್ತಾರೆ, ಮಹಿಳೆಯರು ದೂರದಲ್ಲಿಯೇ ನಿಂತು ಭೂತಗಳ ಆರ್ಭಟ ನೋಡುತ್ತಾರೆ.

ಭೂತನೆರಿಗೆ ಆಚರಣೆಗಿದೆ 600 ವರ್ಷಗಳ ಇತಿಹಾಸ:

ತೂಬಗೆರೆಯ ಗ್ರಾಮದ ಆಂಜನೇಯ ದೇವಸ್ಥಾನದಿಂದ ಆರಂಭವಾಗುವ ಭೂತಗಳ ಆರ್ಭಟ ಊರಿನ ವಿವಿಧೆಡೆ ಸಂಚರಿಸಿ ಶ್ರೀಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಮುಕ್ತಾಯವಾಗುತ್ತದೆ, ಕೆಂಚಣ್ಣ ವೇಷಧಾರಿಯಾಗಿ ತೇರಿನ ಬೀದಿಯ ವೆಂಕಟೇಶ್, ಕರಿಯಣ್ಣ ವೇಷಧಾರಿಯಾಗಿ ಶೇಖರ್ ಪ್ರಮುಖ ಆಕರ್ಷಣೆಯಾಗಿರುತ್ತಾರೆ.

ಆಂಜನೇಯ ದೇವಸ್ಥಾನದಲ್ಲಿ ಆರ್ಚಕ ಆನಂದ್, ಕರಿಯಣ್ಣ - ಕೆಂಚಣ್ಣರ ಮೇಲೆ ಮಂತ್ರಪಠಣ ಮಾಡಿ ಅವರಿಬ್ಬರ ಮೇಲೆ ಭೂತಗಳ ಆವಾಹನೆ ಮಾಡುತ್ತಾರೆ. ಭೂತಗಳ ಆವಾಹನೆ ನಂತರ ಆಕ್ರೋಶಗೊಳ್ಳುವ ಅವರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಾರೆ. ಭೂತಗಳ ಆರ್ಭಟವನ್ನು ನೋಡಲು ಸುತ್ತಮುತ್ತಲಿನ ಗ್ರಾಮಸ್ಥರು ತೂಬಗೆರೆಗೆ ಬರುತ್ತಾರೆ.

ಹಿನ್ನೆಲೆ:

ಪ್ರತಿ ವರ್ಷ ಆಷಾಢ ಮಾಸದ ಏಕಾದಶಿಯಾದ ಮಾರನೇ ದಿನವಾದ ದ್ವಾದಶಿಯಂದು ಪುರಾತನ ಕಾಲದಿಂದಲೂ ತೂಬಗೆರೆ ಗ್ರಾಮದಲ್ಲಿ ಭೂತ ನೆರಿಗೆ ಹಬ್ಬವನ್ನು ಆಚರಿಸಿಕೊಂಡು ಬರಲಾಗಿದೆ. ವಿಷ್ಣುವಿನ ದ್ವಾರಪಾಲಕರಾದ ಜಯ - ವಿಜಯರು ಶಾಪಕ್ಕೆ ಗುರಿಯಾಗಿ ಕಲಿಯುಗದಲ್ಲಿ ಕರಿಯಣ್ಣ ಕೆಂಚಣ್ಣರಾಗಿ ಭೂಲೋಕಕ್ಕೆ ಬರುತ್ತಾರೆ ಎಂಬ ಐತಿಹಾಸಿಕ ಹಿನ್ನೆಲೆ ಇದೆ. ಕರಿಯಣ್ಣ ಮತ್ತು ಕೆಂಚಣ್ಣ ವೇಷಧಾರಿಗಳು ಮನೆಗೆ ಬಂದರೆ ಮನೆಯಲ್ಲಿನ ದ್ವೆವ್ವ ಪಿಶಾಚಿಗಳು ಓಡಿ ಹೋಗುತ್ತವೆ ಎಂಬ ನಂಬಿಕೆಯೂ ಇದೆ.

ಇದನ್ನೂ ಓದಿ:ಹೃದಯಾಘಾತ: ಆಹಾರ ಅರಸಿ ಬಂದಿದ್ದ ಕಾಡಾನೆ ಸಾವು

Last Updated : Jul 22, 2021, 10:04 AM IST

ABOUT THE AUTHOR

...view details