ಆನೇಕಲ್ (ಬೆಂಗಳೂರು): ಮೂರು ತಿಂಗಳ ಹಿಂದೆ ಪತಿಯ ಕಿರುಕುಳ ತಾಳಲಾರದೆ ಪ್ರಿಯಕರನ ಮೂಲಕ ಕೊಲೆಗೆ ಸಂಚು ರೂಪಿಸಿ ರಸ್ತೆ ಅಪಘಾತದಂತೆ ಕೊಲ್ಲಿಸಿ ಮಿಸ್ಸಿಂಗ್ ದೂರು ನೀಡಿದ ಪತ್ನಿ ಪೊಲೀಸರ ಅತಿಥಿಯಾಗಿದ್ದಾಳೆ. ಸರ್ಜಾಪುರದಲ್ಲಿ ಘಟನೆ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಆಂಧ್ರಪ್ರದೇಶದ ಅಣ್ಣಾಮಲೈ ಜಿಲ್ಲೆಯ ಚಿತ್ತೂರು ತಾಲೂಕಿನ ಬೊಮ್ಮಿರೆಡ್ಡಿ ಪಾಳ್ಯ ಮೂಲದ ಪವನ್ ಕುಮಾರ್ (37) ಎಂದು ಗುರುತಿಸಲಾಗಿದೆ. ಅದೇ ಗ್ರಾಮದ ಪಾರ್ವತಿ ಕೊಲೆ ಮಾಡಿಸಿದ ಆರೋಪಿ.
ಪ್ರಕರಣದ ವಿವರ: ಸರ್ಜಾಪುರ ಭಾಗಕ್ಕೆ ಬಂದು ಬಿಲ್ಲಾಪುರದಲ್ಲಿ ನೆಲೆಸಿ ಖಾಸಗಿ ಶಾಲಾ ಬಸ್ ಚಾಲಕನಾಗಿ ಪವನ್ ಕೆಲಸ ಮಾಡುತ್ತಿದ್ದ. ಇಬ್ಬರಿಗೂ 18 ವರ್ಷದ ಹಿಂದೆ ಮದುವೆಯಾಗಿತ್ತು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಪಾರ್ವತಿ ಇಲ್ಲಿಯ ಗಾರ್ಮೆಂಟ್ಸ್ನಲ್ಲಿ ಕೆಲಸಕ್ಕೆ ಸೇರಿ ಇಬ್ಬರು ಮಕ್ಕಳನ್ನು ಪೋಷಿಸುತ್ತಿದ್ದಳು. ಲಾಕ್ಡೌನ್ನಲ್ಲಿ ಗಾರ್ಮೆಂಟ್ಸ್ ಮುಚ್ಚಲಾಗಿತ್ತು. ಗಂಡನ ಶಾಲಾ ವಾಹನ ಚಾಲನೆಯೂ ಬಂದ್ ಆಗಿತ್ತು. ಪಾರ್ವತಿ ಕಾಡ ಅಗ್ರಹಾರದ ರಾಜಾರೆಡ್ಡಿ ತೋಟಕ್ಕೆ ಕೂಲಿ ಕೆಲಸಕ್ಕೆ ಸೇರಿದ್ದಳು.
ಅಲ್ಲಿ ತರಕಾರಿ ಸಾಗಣೆ ವಾಹನ ಚಾಲಕನೊಂದಿಗೆ ಪರಿಚಯವಾಗಿದೆ. ಈ ವಿಷಯ ಗಂಡ ಪವನ್ಗೆ ಗೊತ್ತಾಗಿ ಜಗಳವಾಗಿದೆ. ನಂತರ ತನ್ನಿಬ್ಬರು ಮಕ್ಕಳನ್ನು ಕರೆದುಕೊಂಡು ಮದನಪಲ್ಲಿಗೆ ಪಾರ್ವತಿ ತವರುಮನೆಗೆ ಹೊರಟು ಹೋಗಿದ್ದಳು. ಆದರೂ ಗಂಡ ಆಗಾಗ ಕೊಡುವ ಕಾಟ ತಾಳಲಾರದೆ ಪ್ರಿಯಕರ ಬೊಲೆರೋ ಪಿಕಪ್ ಚಾಲಕ ಬಿ ಹೊಸಹಳ್ಳಿ ಯಲ್ಲಪ್ಪನಿಗೆ ತಿಳಿಸಿ ಎಲ್ಲಾದರೂ ಅಪಘಾತದ ತರಹ ಮುಗಿಸಿಬಿಡು ಎಂದು ಸಂಚು ರೂಪಿಸುತ್ತಾಳೆ.