ದೊಡ್ಡಬಳ್ಳಾಪುರ: ವೃದ್ಧೆಯೊಬ್ಬರು ಮಳೆಯಲ್ಲಿ ನೆನೆಯುತ್ತ ರಸ್ತೆ ಬದಿಯಲ್ಲಿ ಬಿದ್ದಿದ್ರೂ, ಯಾರೂ ಸಹಾಯಕ್ಕೆ ಬಾರದೇ ಅಮಾನವೀಯತೆ ಮೆರೆದಿರುವ ಘಟನೆ ನಗರದಲ್ಲಿ ನಡೆದಿದೆ.
ಕೊರೊನಾದಿಂದ ಸತ್ತು ಹೋಯ್ತ ಮಾನವೀಯತೆ: ಮಳೆಯಲ್ಲಿ ವೃದ್ಧೆ ಬಿದ್ದಿದ್ರೂ ಕ್ಯಾರೆ ಎನ್ನದ ಜನ!
ಕೊರೊನಾ ಭಯದಿಂದ ಜನರು ಸಾಮಾಜಿಕ ಅಂತರ, ಮಾಸ್ಕ್ ಧರಿಸಿ ಕೊರೊನಾದಿಂದ ಸೇಫ್ ಆಗಲು ಪರದಾಡುತ್ತಿದ್ದಾರೆ. ಇದರೊಟ್ಟಿಗೆ ಮಾನವೀಯತೆಯೂ ಸಹ ಮರೆತು ಹೋಗಿದೆ ಎಂಬ ಮಾತು ಈ ಘಟನೆಯಿಂದ ತಿಳಿದು ಬರುತ್ತಿದೆ.
ಕೊರೊನಾ ಭಯ ಮನುಷ್ಯರನ್ನ ಮನುಷ್ಯತ್ವದಿಂದಲೂ ದೂರ ಮಾಡಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ನಗರದ ರುಮಾಲೆ ಛತ್ರದ ಸರ್ಕಲ್ ಬಳಿಯ ಬಿಡಿಸಿಸಿ ಬ್ಯಾಂಕ್ ಗೇಟ್ ಮುಂಭಾಗದಲ್ಲಿ 60 ವರ್ಷ ಮೇಲ್ಪಟ್ಟ ವೃದ್ಧೆ ಅಸ್ವಸ್ಥಗೊಂಡು ಬಿದ್ದಿದ್ದಾರೆ. ಆಕೆಯನ್ನು ನೋಡಿದ ನೂರಾರು ಜನರು ಸಹಾಯಕ್ಕೆ ಧಾವಿಸದೇ ಹಾಗೆ ತೆರಳಿದ್ದಾರೆ. ಆಕೆಯನ್ನು ಆಸ್ಪತ್ರೆಗೆ ಸಾಗಿಸುವ ಅಥವಾ ಪೊಲೀಸರಿಗೆ ಮಾಹಿತಿಯನ್ನು ಸಹ ನೀಡಿಲ್ಲ.
ಕೊರೊನಾ ಸೋಂಕು ತಗುಲಿದೆ ಎಂಬ ಭಯ ಜನರನ್ನು ಕಾಡಿದ್ದು, ಆಕೆಗೆ ಏನಾಗಿದೆ ಅಂತಾ ಸಹ ನೋಡಲಿಲ್ಲ, ಮಾತನಾಡದ ಸ್ಥಿತಿಯಲ್ಲಿರುವ ವೃದ್ಧೆಯ ಗುರುತು ಸಹ ಪತ್ತೆಯಾಗಿಲ್ಲ. ಮಳೆಯಲ್ಲಿ ನೆನೆಯುತ್ತ ಬಿದ್ದಿದ್ದ ವೃದ್ದೆಯನ್ನ ಕಂಡಾಗ ಮಾನವೀಯತೆ ಸತ್ತು ಹೋಗಿದೆ ಎನ್ನಿಸುವಂತಿತ್ತು.