ದೇವನಹಳ್ಳಿ:ಫಾಸ್ಟ್ಟ್ಯಾಗ್ ಕಡ್ಡಾಯ ಮಾಡಿರುವುದನ್ನು ಖಂಡಿಸಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಪರ ಸಂಘಟನೆ ಕಾರ್ಯಕರ್ತರು ದೇವನಹಳ್ಳಿ ಏರ್ಪೋರ್ಟ್ ಟೋಲ್ ಫ್ಲಾಜಾಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, ಫಾಸ್ಟ್ಟ್ಯಾಗ್ ಮಾಡಿ ಮಿಲಿಟರಿ ಸರ್ಕಾರ ಮಾಡ್ತಿದ್ದಾರೆ, ಇದು ಕೇಂದ್ರ ಸರ್ಕಾರದ ಪಿತೂರಿಯಾಗಿದೆ. ಒಂದು ವಾರದ ಗಡುವು ಕೊಟ್ಟಿದ್ದೇವೆ ಅಷ್ಟರಲ್ಲಿ ಫಾಸ್ಟ್ಟ್ಯಾಗ್ ತೆಗೆಯಬೇಕು, ಇಲ್ಲದಿದ್ದಲ್ಲಿ ರಾಜ್ಯಾದ ಎಲ್ಲ ಟೋಲ್ಗಳ ಮುಂದೆ ಹೋರಾಟ ಮಾಡುವ ಎಚ್ಚರಿಕೆ ನೀಡಿದರು.
ಫಾಸ್ಟ್ಟ್ಯಾಗ್ ಕಡ್ಡಾಯ ಖಂಡಿಸಿ ಪ್ರತಿಭಟನೆ ತೈಲ ಬೆಲೆ ಏರಿಕೆ ಕುರಿತು ಮಾತನಾಡಿ, ಕೇಂದ್ರ ಸರ್ಕಾರ ಗ್ಯಾಸ್ ಬೆಲೆ ರಾತ್ರೋರಾತ್ರಿ 50 ರೂ. ಏರಿಕೆ ಮಾಡಿದೆ, ಕೇಂದ್ರ ಸರ್ಕಾರಕ್ಕೆ ಬಡವರು ಮತ್ತು ಮಧ್ಯಮ ವರ್ಗದವರ ಮೇಲೆ ಕಾಳಜಿ ಇಲ್ಲ, ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಸಹ 100 ರೂ. ಆಗಲಿದೆ, ಇದು ಮಧ್ಯಮ ವರ್ಗದವರ ಮೇಲಿನ ದರೋಡೆ ಮತ್ತು ದಬ್ಬಾಳಿಕೆಯಾಗಿದೆ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.
ಜಾತಿ ಮೀಸಲಾತಿಗಾಗಿ ಮಠಾಧೀಶರು ಬೀದಿಗೆ ಇಳಿದಿದ್ದಾರೆ, ಇದು ಒಳ್ಳೆಯದಲ್ಲ. ಸ್ವಾಮಿಗಳಿಗೆ ಅವರದ್ದೇ ಗೌರವ, ಚಿಂತನೆಯ ಶಕ್ತಿ ಇದೆ. ಅವರು ಬೀದಿಗೆ ಬರ ಬಾರದು ಎಂದರು.