ದೇವನಹಳ್ಳಿ: ಅಕ್ಟೋಬರ್ 14ರಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಮ್ಮ ಲಕ್ಷ್ಮೀನಾರಾಯಣ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಲಿದೆ. ಆದರೆ ಅಧ್ಯಕ್ಷೆ ಜಯಮ್ಮ ಲಕ್ಷ್ಮೀನಾರಾಯಣ ರಾಜೀನಾಮೆ ಕೊಡಲು ನಿರಾಕರಿಸಿದ್ದು, ಉಳಿದ ಐದು ತಿಂಗಳ ಅವಧಿಗೆ ಹೊಸ ಅಧ್ಯಕ್ಷರ ಆಯ್ಕೆಯ ಅಗತ್ಯವಾದರು ಏನು? ತಮ್ಮದೇ ತಾಲೂಕಿನ ಮಹಿಳೆಗೆ ಅಧ್ಯಕ್ಷ ಸ್ಥಾನ ಬೇಕೆನ್ನುವ ಬದಲಿಗೆ ಶಾಸಕರಾದ ಟಿ.ವೆಂಕಟರಮಣಯ್ಯ ಹೊಸಕೋಟೆ ತಾಲೂಕಿಗೆ ಅಧ್ಯಕ್ಷ ಸ್ಥಾನ ಕೊಡಿಸಲು ಉತ್ಸಾಹ ಹೊಂದಿದ್ದಾರೆಂದು ಜಯಮ್ಮ ಲಕ್ಷ್ಮೀನಾರಾಯಣ ತಮ್ಮ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿದ್ದು, 21 ಕ್ಷೇತ್ರಗಳಲ್ಲಿ 13 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಿತು. ಬಿಸಿಎಂ ವರ್ಗಕ್ಕೆ ಅಧ್ಯಕ್ಷ ಸ್ಥಾನ ಬಂದ ಹಿನ್ನೆಲೆ ಕಾಂಗ್ರೆಸ್ ಪಕ್ಷದ ಸೂಲಿಬೆಲೆ ಕ್ಷೇತ್ರದ ವಿ.ಪ್ರಸಾದ್, ನಂದಗುಡಿ ಕ್ಷೇತ್ರದ ನಾಗರಾಜ್ ಮತ್ತು ಸಾಸಲು ಕ್ಷೇತ್ರದ ಜಯಮ್ಮ ಲಕ್ಷ್ಮೀನಾರಾಯಣ ಅಧ್ಯಕ್ಷ ಸ್ಥಾನದ ಅಕಾಂಕ್ಷಿಗಳಾಗಿದ್ದರು. ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ವೀರಪ್ಪ ಮೊಯ್ಲಿ ಮತ್ತು ಕೃಷ್ಣಬೈರೇಗೌಡ ತೀರ್ಮಾನದಂತೆ ಮೊದಲ ಎರಡು ವರ್ಷ ಒಬ್ಬರಿಗೆ ಹಾಗೆಯೇ ಮೂರು ವರ್ಷಗಳ ಅವಧಿ ಎರಡನೇ ಅಧ್ಯಕ್ಷರಿಗೆ ತಿರ್ಮಾನವಾಗಿತ್ತು. ವರಿಷ್ಠರ ತೀರ್ಮಾನದಂತೆ ಸೂಲಿಬೆಲೆ ಕ್ಷೇತ್ರದ ವಿ.ಪ್ರಸಾದ್ ಮೊದಲ ಅವಧಿಯಲ್ಲಿ ಅಧ್ಯಕ್ಷರಾದರು. ಎರಡನೇ ಅವಧಿಯಲ್ಲಿ ಸಾಸಲು ಕ್ಷೇತ್ರದ ಜಯಮ್ಮ ಲಕ್ಷ್ಮೀನಾರಾಯಣ ಅಧ್ಯಕ್ಷಗಾದಿ ಏರಿದ್ರು. ಆದರೀಗ ಜಯಮ್ಮ ಲಕ್ಷ್ಮೀನಾರಾಯಣ ವಿರುದ್ಧ ಅವಿಶ್ವಾಸ ನಿರ್ಣಯ ಕೈಕೊಳ್ಳಲಾಗಿದೆ. ಕೇವಲ 5 ತಿಂಗಳ ಅವಧಿ ಮಾತ್ರ ಉಳಿದಿದ್ದು, ಕೋವಿಡ್ ಸಮಯದಲ್ಲಿ ಅಧ್ಯಕ್ಷರನ್ನು ಬದಲಾಯಿಸಿ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವ ಅವಶ್ಯಕತೆ ಇದೆಯೇ ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.