ಯಲಹಂಕ: ಬೆಂಗಳೂರು ನಗರ ಬೆಳೆಯುತ್ತಿದ್ದಂತೆ ಅಕ್ಕಪಕ್ಕ ಇದ್ದ ಕೃಷಿ ಭೂಮಿಗಳನ್ನು ಬಡಾವಣೆಗಳಾಗಿ ಪರಿವರ್ತಿಸಿ ನಿವೇಶನ ಮಾಡಿ ಹಣ ಮಾಡಿಕೊಂಡಿರುವ ಜನರು ಹೆಚ್ಚು. ಆದ್ರೆ ಇದೇ ನಗರದ ಇಬ್ಬರು ಸಹೋದರರು ತಮ್ಮ ಭೂಮಿಯ ಸುತ್ತೆಲ್ಲ ಸೈಟ್ಗಳಾಗಿ ಮಾರಾಟವಾಗುತ್ತಿದ್ದರೂ ತಲೆಕೆಡಿಸಿಕೊಳ್ಳದೇ ತಮ್ಮ ಜಮೀನಿನಲ್ಲಿ ಕೃಷಿ ಮಾಡಿ ಕೈ ತುಂಬ ಹಣ ಸಂಪಾದನೆ ಮಾಡುತ್ತಿದ್ದಾರೆ.
ಯಲಹಂಕ ತಾಲೂಕಿನ ಹಾರೋಹಳ್ಳಿ ಗ್ರಾಮದ ಶ್ರೀನಿವಾಸ್ ರೆಡ್ಡಿ ಹಾಗೂ ವೇಣುಗೋಪಾಲ್ ರೆಡ್ಡಿ ತಮ್ಮ ಬೆಲೆ ಬಾಳುವ ಜಮೀನಿನಲ್ಲಿ ಅಮೆರಿಕ ಮೂಲದ ಡ್ರ್ಯಾಗನ್ ಹಣ್ಣು ಬೆಳೆಯುತ್ತಿದ್ದಾರೆ. ಹಿಂದಿನಿಂದಲೂ ಈ ಸಹೋದರರ ಕುಟುಂಬ ಕೃಷಿಯನ್ನೇ ನೆಚ್ಚಿಕೊಂಡಿದೆ. ಶ್ರೀನಿವಾಸ್ ರೆಡ್ಡಿ ಅವರ ತಂದೆ ಈ ಹಿಂದೆ ತಮ್ಮ 9 ಎಕರೆ ಜಮೀನಿನಲ್ಲಿ ಸೀಬೆ ಹಣ್ಣು, ಕಬ್ಬು ಬೆಳೆಯುತ್ತಿದ್ದರು. ಆದ್ರೆ ಕಾಲ ಕ್ರಮೇಣ ಈ ಕೃಷಿಯಲ್ಲಿ ಹೇಳಿಕೊಳ್ಳುವ ಲಾಭ ಸಿಗದೇ ತಕ್ಕಮಟ್ಟಕ್ಕೆ ಜೀವನ ನಡೆಸುತ್ತಿದ್ರಂತೆ. ಕಾಲಾ ನಂತರದಲ್ಲಿ ಬೆಳೆ ಬದಲಾಯಿಸಲು ತೀರ್ಮಾನಿಸಿದ ಈ ಸಹೋದರರು ಬ್ಲೂದ್ರಾಕ್ಷಿಯನ್ನು 12 ವರ್ಷಗಳ ಕಾಲ ಬೆಳೆದಿದ್ದರು.
ಕಪ್ಪು ದ್ರಾಕ್ಷಿಯಲ್ಲಿ ಅಷ್ಟೇನೂ ಲಾಭ ಸಿಗಲಿಲ್ಲ. ಮಳೆ ಬಂದ್ರೆ ಸಾಕು ದಿನನಿತ್ಯ ಔಷಧಿ ಸಿಂಪಡಣೆ, ನಿರ್ವಹಣೆ ಕಷ್ಟವಾಗುತ್ತಿತ್ತು. ಇದರಿಂದ ಬೇಸತ್ತ ಇವರು 2016 ರಲ್ಲಿ ಬೇರೆ ಏನಾದರೂ ಬೇರೆ ಕೃಷಿ ಮಾಡಿ ಸಾಧನೆ ಮಾಡಬೇಕೆಂಬ ಹಂಬಲ ಇಟ್ಟುಕೊಂಡರಂತೆ. ಪ್ರತಿದಿನ ವಾಯುವಿಹಾರಕ್ಕೆ ಜಿಕೆವಿಕೆ ಕ್ಯಾಂಪಸ್ನಲ್ಲಿ ಹೋಗುತ್ತಿದ್ದ ಶ್ರೀನಿವಾಸ್ ರೆಡ್ಡಿ ಅಲ್ಲಿನ ಡ್ರ್ಯಾಗನ್ ಹಣ್ಣಿನ ಗಿಡ ಕಂಡು ಇದನ್ನೇ ತಮ್ಮ ಜಮೀನಿನಲ್ಲಿ ಬೆಳೆಯಲು ತೀರ್ಮಾನಿಸಿದ್ದರಂತೆ.