ದೊಡ್ಡಬಳ್ಳಾಪುರ: ನಾಗರಕೆರೆ ನೀರು ಕಲುಷಿತಗೊಂಡಿರುವ ಬಗ್ಗೆ ಹಸಿರು ನ್ಯಾಯಪೀಠಕ್ಕೆ ಸಾರ್ವಜನಿಕರೊಬ್ಬರು ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಜಿಲ್ಲಾಧಿಕಾರಿ ನಾಗರಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಆದ್ರೆ, ಡಿಸಿ ಬರುವ ಮುಂಚೆಯೇ ನಗರಸಭೆ ತರಾತುರಿಯಲ್ಲಿ ಕೆರೆ ಸ್ವಚ್ಛತಾ ಕಾರ್ಯ ಕೈಗೊಂಡು ಸತ್ಯ ಮರೆಮಾಚುತ್ತಿದೆ ಎಂದು ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ದೊಡ್ಡಬಳ್ಳಾಪುರ ನಗರದ ಹೃದಯ ಭಾಗದಲ್ಲಿರುವ ಕೆರೆ ಸಾವಿರಾರು ಪಕ್ಷಿಗಳಿಗೆ ಆಶ್ರಯ ತಾಣವಾಗಿದೆ. ಕೆರೆಯಿಂದ ನಗರದ ಸೌಂದರ್ಯಕ್ಕೂ ಒಂದು ಶೋಭೆ ತಂದಿದೆ. ಆದರೆ, ದೊಡ್ಡಬಳ್ಳಾಪುರ ನಗರಸಭೆಯವರು ಒಳಚರಂಡಿ ಪೈಪ್ಲೈನ್ ಅನ್ನು ಕೆರೆಯ ಅಂಗಳದಲ್ಲಿ ತೆಗೆದುಕೊಂಡು ಹೋಗಿದ್ದಾರೆ. ಇದರಿಂದ ಕೆರೆಗೆ ಕಲುಷಿತ ನೀರು ಸೇರುತ್ತಿದೆ. ನಗರಸಭೆಯ ಒಳಚರಂಡಿ ವ್ಯವಸ್ಥೆ ಕೆರೆಯನ್ನು ಸಂಪೂರ್ಣವಾಗಿ ಕಲುಷಿತಗೊಳಿಸಿದೆ ಎಂದು ಗಿರೀಶ್ ಎನ್.ಪಿ ಎಂಬುವರು ಚೆನ್ನೈನಲ್ಲಿರುವ ಹಸಿರು ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು.