ಬೆಂಗಳೂರು ಗ್ರಾಮಾಂತರ: ಕೊರೊನಾ ಸಮಯದಲ್ಲಿ ಕೆಲಸವಿಲ್ಲದೇ ಕೈಕಟ್ಟಿ ಕುಳಿತ್ತಿದ್ದ ಜನರಿಗೆ ಕೈ ತುಂಬಾ ಕೆಲಸ ಕೊಟ್ಟಿದ್ದು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆ (ನರೇಗಾ). ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ನರೇಗಾ ಯೋಜನೆಯನ್ನು ಸಮಪರ್ಕವಾಗಿ ಬಳಸಿಕೊಂಡು 8 ಲಕ್ಷ ಮಾನವ ದಿನಗಳ ಕೆಲಸವನ್ನು ಜಿಲ್ಲೆಯ ಜನರಿಗೆ ಕೊಟ್ಟಿದೆ.
ಬೆಂಗಳೂರು: ಗ್ರಾಮೀಣ ಕುಟುಂಬಗಳ ಕೈ ಹಿಡಿದ ನರೇಗಾ ಕಾಮಗಾರಿಗಳು ಕೋವಿಡ್ ಹಿನ್ನೆಲೆ ಕೆಲಸ ಕಳೆದುಕೊಂಡ ಕಾರ್ಮಿಕರು ನಗರ ಪ್ರದೇಶದಿಂದ ಹಳ್ಳಿಗಳಿಗೆ ಹಿಂತಿರುಗಿದ್ದರು. ಗ್ರಾಮೀಣ ಭಾಗದಲ್ಲೂ ಕೆಲಸವಿಲ್ಲದೇ ಇದ್ದವರಿಗೆ ನರೇಗಾ ಯೋಜನೆ ನೆರವಾಗಿದೆ. ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎನ್. ಎಂ. ನಾಗರಾಜ್ ನರೇಗಾ ಯೋಜನೆಯ ಸಮಪರ್ಕ ಸದುಪಯೋಗ ಪಡೆಯಲು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಪ್ರಮುಖವಾಗಿ ನರೇಗಾ ಯೋಜನೆಯಲ್ಲಿ ಸಾಂಪ್ರದಾಯಿಕ ಜಲ ಮೂಲಗಳ ಸಂರಕ್ಷಣೆಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಸಣ್ಣ ಕೆರೆ, ಗೋ ಕಟ್ಟೆ, ಕೃಷಿ ಹೊಂಡ, ಕಲ್ಯಾಣಿ ನಿರ್ಮಾಣ ಕಾಮಗಾರಿಗೆ ಹೆಚ್ಚು ಒತ್ತು ನೀಡಲಾಯಿತು. ಮುಂಗಾರು ಪೂರ್ವದಲ್ಲಿಯೇ ಕಾಮಗಾರಿ ಆರಂಭವಾದ್ದರಿಂದ ಉತ್ತಮ ಮಳೆಯಿಂದ ಕೆರೆ ಕುಂಟೆಗಳಲ್ಲಿ ನೀರು ತುಂಬಿದೆ. ಜೊತೆಗೆ ಬಡವರಿಗೆ ಮನೆ ಕಟ್ಟಲು ವಸತಿ ಯೋಜನೆಗೆ 90 ಮಾನವ ದಿನಗಳ 24 ಸಾವಿರ ಹಣ ಸಹಾಯಧನ ನೀಡಲಾಗಿದೆ.
ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಷ್ಟೇ ಹಣವನ್ನು ನರೇಗಾ ಯೋಜನೆಯಲ್ಲಿ ಕೊಡುತ್ತಿದೆ. ಶಾಲಾ ಕಾಂಪೌಂಡ್ ನಿರ್ಮಾಣ , ಮನರಂಜನೆ ಮತ್ತು ವಿಶ್ರಾಂತಿ ಪಡೆಯಲು ಗ್ರಾಮೀಣ ಉದ್ಯಾನ ವನ, ಕೃಷಿ ಚಟುವಟಿಕೆಯಲ್ಲಿ ಕೃಷಿ ಹೊಂಡ , ಅರಣ್ಯೀಕರಣಕ್ಕೆ ಹಣ ಸಹಾಯ ಮಾಡುತ್ತಿದೆ. ಈ ವರ್ಷ ಬದು ನಿರ್ಮಾಣ ಮಾಸ ಆಚರಿಸಿದ್ದು, ಮಳೆಗಾಲ ಪೂರ್ವದಲ್ಲಿ ರೈತರ ಹೊಲಗಳಲ್ಲಿ ಬದು ನಿರ್ಮಾಣ ಮಾಡಲು ಮತ್ತು ಬದುವಿನ ಮೇಲೆ ಗಿಡ ನೆಡಲು ಸಹ ಧನಸಹಾಯ ಮಾಡಿದೆ. ಒಕ್ಕಣೆ ಕಣ ನಿರ್ಮಾಣ ಮಾಡುವ ಮೂಲಕ ರೈತರಿಗೆ ನೇರವಾಗಿದೆ. ಈ ಹಿಂದೆ ರಸ್ತೆಗಳ ಮೇಲೆ ಕಣ ಮಾಡುತ್ತಿದ್ದ ರೈತರು ಈ ವರ್ಷದಿಂದ ನರೇಗಾ ಯೋಜನೆಯಲ್ಲಿ ಸಿದ್ಧವಾದ ಒಕ್ಕಣೆ ಕಣ ಬಳಸಬಹುದಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಈ ವರ್ಷ 11 ಲಕ್ಷ ಮಾನವ ದಿನಗಳನ್ನು ಸೃಷ್ಟಿಸುವ ಗುರಿ ಇದ್ದು, ಈಗಾಗಲೇ 8 ಲಕ್ಷ ಮಾನವ ದಿನಗಳ ಬಳಕೆ ಮಾಡಲಾಗಿದೆ ಮುಂದಿನ ದಿನಗಳಲ್ಲಿ ಮತ್ತಷ್ಟು ಮಾನವ ದಿನ ಪಡೆದು ಗ್ರಾಮೀಣ ಕುಟುಂಬ ಅಭಿವೃದ್ಧಿಗೆ ನೇರವಾಗಲಿದೆ ಎಂದು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎನ್. ಎಂ. ನಾಗರಾಜ್ ಹೇಳಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟು 1,83,709 ಕುಟುಂಬಗಳಿದ್ದು, ಇದರಲ್ಲಿ 36,370 ಪರಿಶಿಷ್ಟ ಜಾತಿ ಕುಟುಂಬ ಮತ್ತು 9,244 ಪರಿಶಿಷ್ಟ ಪಂಗಡ ಕುಟುಂಬಗಳಿವೆ. ನರೇಗಾ ಯೋಜನೆ ಒಟ್ಟು 5,38,000 ಮಾನವ ದಿನಗಳ ಗುರಿ ಹೊಂದಿದ್ದು, 7,86,015 ಮಾನವ ದಿನಗಳ ಸಾಧನೆ ಮಾಡಲಾಗಿದೆ. ಈ ಮೂಲಕ ಶೇಕಡಾ 146 ರಷ್ಟು ನರೇಗಾ ಯೋಜನೆಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನರು ಬಳಸಿಕೊಂಡಿದ್ದಾರೆ. ಕೊರೊನಾ ಸಮಯದಲ್ಲಿ ನರೇಗಾ ಯೋಜನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನರ ಕೈ ಹಿಡಿದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನರೇಗಾ ಯೋಜನೆ ಅಡಿ ಒಟ್ಟು 5,536 ಕಾಮಗಾರಿ ನಡೆದಿದ್ದು 1446 ಬದು ನಿರ್ಮಾಣ, 419 ಕಿಚನ್ ಗಾರ್ಡನ್, 499 ಕೃಷಿ ಹೊಂಡ, 1652 ಸೋಕ್ ಫಿಟ್, 67 ಮಳೆ ನೀರು ಕೊಯ್ಲು, 145 ಗೋಕಟ್ಟೆ, 26 ಕೆರೆ ಅಭಿವೃದ್ಧಿ, 85 ರಾಜ ಕಾಲುವೆ ಪುನಶ್ಚೇತನ, 9 ಉದ್ಯಾನ , 2 ಗೋದಾಮು, 2 ಸ್ತ್ರೀ ಶಕ್ತಿ ಭವನ, 28 ಸ್ಮಶಾನ ಅಭಿವೃದ್ಧಿ, 8 ತೆರೆದ ಬಾವಿ, 111 ನೀರಿನ ತೊಟ್ಟಿ, 28 ಇಂಗು ಗುಂಡಿ, 32 ಶಾಲಾ ಆವರಣ, 921 ದನದ ಕೊಟ್ಟಿಗೆ. ಹೀಗೆ ಹಲವು ಕಾಮಗಾರಿಗಳು ನರೇಗಾ ಯೋಜನೆಯಲ್ಲಿ ಪೂರ್ಣಗೊಂಡಿವೆ.