ದೊಡ್ಡಬಳ್ಳಾಪುರ: ಸತ್ತ ಹಸುವಿನ ಕಿವಿಯೋಲೆ ಕಳೆದು ಹೋಗಿದ್ದರಿಂದ ಇನ್ಯೂರೆನ್ಸ್ ಹಣ ನೀಡಲು ಬಮೂಲ್ ಅಧಿಕಾರಿಗಳು ನಿರಾಕರಿಸಿದ್ದಾರೆ ಎಂದು ಮಹಿಳೆಯೊಬ್ಬರು ಅಳಲು ತೋಡಿಕೊಂಡಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ರಘುನಾಥಪುರದ ಮುನಿಯಮ್ಮ ಕುಟುಂಬಕ್ಕೆ ಪಶು ಸಂಗೋಪನೆಯೇ ಜೀವನೋಪಾಯ. ದುರಾದೃಷ್ಟವಶಾತ್ ಕಳೆದ ಎರಡು ವರ್ಷಗಳಲ್ಲಿ ಮುನಿಯಮ್ಮನವರ 5 ಹಸುಗಳು ಸಾವನ್ನಪ್ಪಿವೆ.
ಆದರೆ, ಈವರೆಗೂ ಇನ್ಯೂರೆನ್ಸ್ ಹಣ ಮಾತ್ರ ಮುನಿಯಮ್ಮರವರ ಕೈ ಸೇರಿಲ್ಲ. ಇದರಿಂದಾಗಿ ಪಶು ಸಂಗೋಪನೆಯಿಂದ ಜೀವನ ನಡೆಸುತ್ತಿರುವ ಬಡ ಕುಟುಂಬ ಲಕ್ಷ-ಲಕ್ಷ ಬೆಲೆ ಬಾಳುವ ಹಸುಗಳನ್ನು ಕಳೆದುಕೊಂಡು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ.
ಒಂದೂವರೆ ವರ್ಷದ ಹಿಂದೆ ಒಂದು ಲಕ್ಷ ಮೌಲ್ಯದ ಹೆಚ್ಎಫ್ಎಕ್ಸ್ ತಳಿಯ ಹಸುವೊಂದು ಸಾವನ್ನಪ್ಪಿದೆ. ಹಾವು ಕಡಿತದಿಂದ ಸಾವನ್ನಪ್ಪಿರುವ ಸಂಶಯ ಇದೆ. ಇದೇ ಹಸುವಿಗೆ ಮುನಿಯಮ್ಮ ಬಮೂಲ್ ಗುಂಪು ರಾಸುಗಳ ಮರಣ ಪರಿಹಾರದಲ್ಲಿ 60 ಸಾವಿರ ಇನ್ಯೂರೆನ್ಸ್ ಮಾಡಿಸಿದ್ದರು.
ಹಸುವಿನ ನಂಬರ್ ಬಂದಿದ್ದು ಇನ್ಸೂರೆನ್ಸ್ ಕಿವಿಯೋಲೆಯನ್ನ ಹಸುವಿಗೆ ಹಾಕಲಾಗಿತ್ತು. ಆದರೆ, ಹಸುವಿನ ಕಳೆಬರವನ್ನ ಮಣ್ಣು ಮಾಡುವ ಕಾರಣಕ್ಕೆ ಬೇರೊಂದು ಸ್ಥಳಕ್ಕೆ ಸಾಗಿಸುವಾಗ ಇನ್ಯೂರೆನ್ಸ್ ಕಿವಿಯೋಲೆ ಕಳೆದು ಹೋಗಿದೆ. ಇನ್ನೂರೆನ್ಸ್ ಹಣಕ್ಕಾಗಿ ಬಮೂಲ್ ಅಧಿಕಾರಿಗಳನ್ನ ಸಂಪರ್ಕಿಸಿದಾಗ, ಕಿವಿಯೋಲೆ ಇದ್ದರೆ ಮಾತ್ರ ಇನ್ಯೂರೆನ್ಸ್ ಹಣ ಕೊಡುವುದಾಗಿ ಹೇಳಿದ್ದಾರೆ.
ಬಮೂಲ್ ನಿರ್ದೇಶಕರಾದ ಬಿ.ಸಿ.ಆನಂದ್, ಹಾಲಿನ ಡೈರಿಯ ಕಾರ್ಯದರ್ಶಿ, ಪಶು ವೈದ್ಯರಿಗೆ ಸಾವನ್ನಪ್ಪಿರುವ ಹಸುವಿನ ಇನ್ಸೂರೆನ್ಸ್ ನಂಬರ್ ಗೊತ್ತಿದೆ ಅಂತಾರೆ ಮುನಿಯಮ್ಮ. ಆದರೂ, ಇವರೆಲ್ಲಾ ಸಾವನ್ನಪ್ಪಿರುವ ಹಸು ಇದೆಯೆಂದು ಹೇಳಿದ್ದಾರೆ ಅಂತಾ ಆರೋಪಿಸಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಇನ್ಯೂರೆನ್ಸ್ ಹಣಕ್ಕಾಗಿ ಮುನಿಯಮ್ಮ ಬಮೂಲ್ ನಿರ್ದೇಶಕರ ಕಚೇರಿಗೆ ಅಲೆಯುತ್ತಿದ್ದರೂ ಏನೂ ಪ್ರಯೋಜನವಾಗಿಲ್ಲ.
ಎರಡು ವರ್ಷದಲ್ಲಿ ಲಕ್ಷಾಂತರ ಬೆಲೆಯ 5 ಹಸುಗಳನ್ನ ಕಳೆದುಕೊಂಡಿರುವ ಮುನಿಯಮ್ಮ ಬರುವ ಇನ್ಯೂರೆನ್ಸ್ ಹಣದಲ್ಲಿ ಮತ್ತೊಂದು ಹಸುವನ್ನ ಖರೀದಿಸಿ ಜೀವನ ನಡೆಸುವ ಆಸೆಯಲ್ಲಿದ್ದಾರೆ. ಆದರೆ, ಅಧಿಕಾರಿಗಳು ಆಕೆಯ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ.