ದೊಡ್ಡಬಳ್ಳಾಪುರ :ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ ಬಂದ್ ಮಾಡಲಾಗಿತ್ತು. ಆದರೆ, ಇಂದು ಕ್ಷೇತ್ರಕ್ಕೆ ಯಡಿಯೂರಪ್ಪ ಆಗಮಿಸಿದ ಹಿನ್ನೆಲೆ ಭಕ್ತರಿಗೂ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಮಣ್ಯ ಕ್ಷೇತ್ರದ ನಾಗರಾಧನೆಯ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿದೆ.
ನಾಗರ ಪಂಚಮಿ ದಿನ ಘಾಟಿ ಕ್ಷೇತ್ರಕ್ಕೆ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಕೊರೊನಾ 3ನೇ ಅಲೆಯ ಆತಂಕದ ಹಿನ್ನೆಲೆ ಸರ್ಕಾರ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಂಡಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಒಂದೆಡೆ ಸೇರುವುದರಿಂದ ರೋಗ ಹರಡುವ ಸಾಧ್ಯತೆ ಇದೆ.
ದೈನಂದಿನ ಪೂಜಾ ಕಾರ್ಯಗಳನ್ನ ಹೊರತು ಪಡಿಸಿ, ವಿಶೇಷ ದಿನಗಳಾದ ಶ್ರಾವಣ ಮಾಸದ ಶನಿವಾರ, ಭಾನುವಾರ, ರಜಾ ದಿನಗಳಲ್ಲಿ ದೇವಾಲಯಕ್ಕೆ ಭಕ್ತರ ಪ್ರವೇಶ ನಿಷೇಧ ಆದೇಶವನ್ನು ಧಾರ್ಮಿಕ ದತ್ತಿ ಇಲಾಖೆ ಹೊರಡಿಸಿತು. ಆದೇಶದಂತೆ ದೇವಾಲಯದ ಬಾಗಿಲು ಬಂದ್ ಮಾಡಿ ಭಕ್ತರಿಗೆ ದೇವರ ದರ್ಶನ ನಿರಾಕರಿಸಲಾಗಿತ್ತು. ಭಕ್ತರು ದೇವಾಲಯದ ಹೊರಗಿನ ನಾಗರ ಕಲ್ಲುಗಳಿಗೆ ಹಾಲೆರೆದು ಪೂಜೆ ಸಲ್ಲಿಸಿದರು.
ಕೋವಿಡ್ ನಿಯಮ ಉಲ್ಲಂಘಿಸಿ ಭಕ್ತರಿಗೆ ದರ್ಶನ ಭಾಗ್ಯ ಬೆಳಗ್ಗೆ 10 ಗಂಟೆಗೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ದೇವಸ್ಥಾನಕ್ಕೆ ಭೇಟಿ ನೀಡುವ ಹಿನ್ನೆಲೆ ಅವರ ಆಗಮನಕ್ಕೂ ಮುನ್ನವೇ ದೇವಾಲಯದ ಬಾಗಿಲು ತೆಗೆದು ಭಕ್ತರಿಗೂ ದರ್ಶನ ಭಾಗ್ಯವನ್ನ ದೇವಸ್ಥಾನದ ಆಡಳಿತ ಮಂಡಳಿ ನೀಡಿತು. ಯಡಿಯೂರಪ್ಪ ಜೊತೆ ಪುತ್ರ ವಿಜಯೇಂದ್ರ, ಬಿಡಿಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ್ ಸೇರಿದಂತೆ ಬಿಜೆಪಿಯ ಹಲವು ಮುಖಂಡರು ದೇವರ ದರ್ಶನ ಪಡೆದರು. ನಾಗರ ಪಂಚಮಿ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಆಗಮಿಸಿದ ಭಕ್ತರು ಯಡಿಯೂರಪ್ಪ ದಯೆಯಿಂದ ದರ್ಶನ ಭಾಗ್ಯ ಪಡೆದು ಪುನೀತರಾದರು.
ಯಡಿಯೂರಪ್ಪನವರು ದೇವರ ದರ್ಶನ ಮಾಡುವ ಸಲುವಾಗಿ ಜಿಲ್ಲಾಧಿಕಾರಿಗಳ ಆದೇಶದ ಉಲ್ಲಂಘನೆ ಮಾಡಿರುವ ಬಗ್ಗೆ ಸಾರ್ವಜನಿಕ ಟೀಕೆಗಳು ಸಹ ಬಂದಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಘಾಟಿ ಸುಬ್ರಮಣ್ಯ ದೇವಸ್ಥಾನದ ಆಡಳಿತ ಕಾರ್ಯ ನಿರ್ವಾಹಕ ಅಧಿಕಾರಿ ಕೃಷ್ಣಪ್ಪ ನಾಗರ ಪಂಚಮಿ ಹಿನ್ನೆಲೆ ದೇವಸ್ಥಾನದ ಬಾಗಿಲು ಬಂದ್ ಮಾಡಿರುವ ಬಗ್ಗೆ ಭಕ್ತರಿಗೆ ಮಾಹಿತಿ ಸಿಗದ ಹಿನ್ನೆಲೆ ಇಂದು ಕ್ಷೇತ್ರಕ್ಕೆ ಭಕ್ತರು ಆಗಮಿಸಿದರು.
ಜಿಲ್ಲಾಧಿಕಾರಿಗಳಿಂದ ಮೌಖಿಕ ಅನುಮತಿ ಪಡೆದು ಈ ದಿನ ಮಾತ್ರ ಭಕ್ತರಿಗೆ ಅವಕಾಶ ನೀಡಲಾಗಿದೆ. ದೇವಸ್ಥಾನದಲ್ಲಿ ಯಾವುದೇ ಉತ್ಸವ, ಮೆರವಣಿಗೆ ಮತ್ತು ಸೇವಾ ಕಾರ್ಯಗಳು ನಡೆಯುತ್ತಿಲ್ಲವೆಂದು ಸಮಜಾಯಿಷಿ ನೀಡಿದರು.