ಬೆಂಗಳೂರು :ಮಹಿಳೆಯ ಸರ ಕಳವು ಮಾಡಿ ಪರಾರಿಯಾಗುತ್ತಿದ್ದ ಕಳ್ಳನೊಬ್ಬನನ್ನ ಸಿನಿಮೀಯ ರೀತಿಯಲ್ಲಿ ಆಟೋ ಚಾಲಕರೊಬ್ಬರು ಹಿಡಿದು ಪೊಲೀಸರಿಗೊಪ್ಪಿಸಿರುವ ಘಟನೆ ನಗರದ ಸೋಲದೇವನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಸುಮಾರು 2 ಕಿ.ಮೀ ಹಿಂಬಾಲಿಸಿ ಆಟೋಚಾಲಕ ಕಳ್ಳನನ್ನ ಹಿಡಿದು ಪ್ರಶಂಸೆಗೆ ಪಾತ್ರವಾಗಿದಾರೆ.
ದಾಬಸಪೇಟೆ ನಿವಾಸಿ ಕೇಶವಮೂರ್ತಿ (31) ಎನ್ನುವ ಬಂಧಿತ ಆರೋಪಿಯಿಂದ 40 ಸಾವಿರ ರೂ. ಮೌಲ್ಯದ 9.5 ಗ್ರಾಂ ಚಿನ್ನದ ಸರವನ್ನ ಪೊಲೀಸರು ವಶಕ್ಕೆ ಪಡೆದಿದಾರೆ. ಗ್ಯಾಸ್ ಸಿಲಿಂಡರ್ ಪೂರೈಕೆ ಮಾಡುವ ಆಟೋ ಚಾಲಕ ರುದ್ರೇಶ್ ಎಂಬುವರನು ಕಳ್ಳನನ್ನ ಹಿಡಿದುಕೊಂಡು ಪೊಲೀಸರಿಗೆ ಒಪ್ಪಿಸಿದವರು. ರುದ್ರೇಶ್ ಕಾರ್ಯಕ್ಕೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಉತ್ತರ ವಿಭಾಗ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಸಂಜೆ 5 ಗಂಟೆ ಸುಮಾರಿಗೆ ಚಿಕ್ಕಬಾಣವಾರ ನಿವಾಸಿ ಪುಷ್ಪ(32) ಎಂಬುವರು ತಮ್ಮ ಒಂದು ವರ್ಷದ ಮಗು ಹಾಗೂ ಪಕ್ಕದ ಮನೆಯ ಮಹಿಳೆಯೊಬ್ಬರ ಜತೆ ಸಮೀಪದಲ್ಲಿರುವ ದುರ್ಗಾಪರಮೇಶ್ವರಿ ದೇವಾಲಯಕ್ಕೆ ನಡೆದುಕೊಂಡು ಹೋಗಿ, ವಾಪಸ್ ಬರುತ್ತಿದ್ದರು.
ಈ ವೇಳೆ ಹಿಂದಿನಿಂದ ಬಂದ ಆರೋಪಿ ಪುಷ್ಪ ಚಿನ್ನದ ಸರ ಕಸಿದುಕೊಂಡಿದ್ದಾನೆ. ಆಗ ಮಹಿಳೆ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಆದರೂ ಆರೋಪಿ ಮಗುವಿನ ಸಮೇತ ಮಹಿಳೆಯನ್ನು ತಳ್ಳಿ ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದ. ಹೀಗಾಗಿ, ಮಹಿಳೆಯ ಕೈ, ಕುತ್ತಿಗೆ ಭಾಗದಲ್ಲಿ ಗಾಯಗಳಾಗಿವೆ.
ಆರೋಪಿ ಓಡುವಾಗ ಮಹಿಳೆ ಜೋರಾಗಿ ಕೂಗಿಕೊಂಡಿದ್ದಾರೆ. ಅಲ್ಲೇ ಇದ್ದ ಗ್ಯಾಸ್ ಸಿಲಿಂಡರ್ ಪೂರೈಕೆ ಮಾಡುವ ಆಟೋ ಚಾಲಕ ರುದ್ರೇಶ್ ಅವರು ಆರೋಪಿಯನ್ನು ಹಿಂಬಾಲಿಸಿದ್ದಾರೆ. ಆಗ ಆರೋಪಿ ಬಡಿಗೆಯಿಂದ ರುದ್ರೇಶ್ ಮೇಲೆ ಹಲ್ಲೆ ನಡೆಸಿದ್ದಾನೆ. ಆದರೂ ಬಿಡದ ರುದ್ರೇಶ್ ಆರೋಪಿಯನ್ನು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಸ್ಥಳಕ್ಕೆ ಧಾವಿಸಿದ ಪಿಎಸ್‌ಐ ಎಂ.ಜೆ.ಶಿವರಾಜು ಮತ್ತು ತಂಡ ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ಆರೋಪಿ ಪಿಯುಸಿ ವ್ಯಾಸಂಗ ಮಾಡಿದ್ದು, ನರ್ಸಿಂಗ್ ಹೋಮ್‌ವೊಂದರಲ್ಲಿ ಹೋಮ್ ನರ್ಸಿಂಗ್ ಕೆಲಸ ಮಾಡುತ್ತಿದ್ದ. ಒಂದು ತಿಂಗಳ ಹಿಂದೆ ಕೆಲಸ ಬಿಟ್ಟಿದ್ದ. ಯಾವುದೇ ಕೆಲಸವಿಲ್ಲದೆ, ಜೀವನ ನಿರ್ವಹಣೆಗಾಗಿ ಕಳ್ಳತನ ಕೃತ್ಯದಲ್ಲಿ ಭಾಗಿಯಾಗಿದ್ದ ಎಂದು ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಹೇಳಿದ್ದಾರೆ.
ಆಟೋ ಚಾಲಕನಿಗೆ ಬಹುಮಾನ :ಧೈರ್ಯ ಪ್ರದರ್ಶಿಸಿ ಆರೋಪಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಆಟೋ ಚಾಲಕ ರುದ್ರೇಶ್‌ಗೆ ನಗರ ಪೊಲೀಸ್ ಆಯುಕ್ತರು ಮತ್ತು ಉತ್ತರ ವಿಭಾಗ ಉಪ ಪೊಲೀಸ್ ಆಯುಕ್ತರು ಸೂಕ್ತ ಬಹುಮಾನ ಘೋಷಿಸಿದ್ದಾರೆ.