ಆನೇಕಲ್(ಬೆಂಗಳೂರು ಗ್ರಾಮಾಂತರ): ಪ್ರೀತಿಸಿದ ಹುಡುಗಿಯನ್ನು ಬೇರೊಬ್ಬ ಯುವಕ ಮದುವೆಯಾಗದಂತೆ ಎಚ್ಚರಿಕೆ ನೀಡಿದ್ದಲ್ಲದೇ, ಕೊಲೆ ಬೆದರಿಕೆಯೊಡ್ಡಿದ್ದ ಯುವಕನ್ನು ಹತ್ಯೆ ಮಾಡಿದ್ದ ಮೂವರನ್ನು ಅತ್ತಿಬೆಲೆ ಪೊಲೀಸರು ಬಂಧಿಸಿದ್ದಾರೆ.
ಪ್ರೀತಿಸಿದ ಹುಡುಗಿಗಾಗಿ ಯುವಕನ ಕೊಲೆ: ಮೂವರು ಆರೋಪಿಗಳು ಅಂದರ್ - attibele crime news
ಪ್ರೀತಿಸಿದ ಹುಡುಗಿಯನ್ನು ಬೇರೊಬ್ಬ ಯುವಕ ಮದುವೆಯಾಗದಂತೆ ಎಚ್ಚರಿಕೆ ನೀಡಿದ್ದಲ್ಲದೇ, ಕೊಲೆ ಬೆದರಿಕೆಯೊಡ್ಡಿದ ಯುವಕನನ್ನು ಹತ್ಯೆ ಮಾಡಿದ್ದ ಮೂವರು ಆರೋಪಿಗಳನ್ನು ಅತ್ತಿಬೆಲೆ ಪೊಲೀಸರು ಬಂಧಿಸಿದ್ದಾರೆ.
ಆನೇಕಲ್-ಅತ್ತಿಬೆಲೆ ಮುಖ್ಯರಸ್ತೆಯ ಅಮೆಜಾನ್ ಕಂಪನಿಯಲ್ಲಿ ದತ್ತಾತ್ರೇಯ ಎಂಬಾತ ಕೆಲಸ ಮಾಡುತ್ತಿದ್ದ. ಈತ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ ಆ ಯುವತಿ ಹಾಗೂ ಭರತ್ ಎಂಬಾತ ಪರಸ್ಪರ ಪ್ರೀತಿಸುತ್ತಿದ್ದರು. ಇದರಿಂದ ಕುಪಿತನಾದ ದತ್ತಾತ್ರೇಯ, ನಾನು ಪ್ರೀತಿಸಿದ ಹುಡುಗಿಯನ್ನು ನೀನು ಮದುವೆಯಾಗಬೇಡ ಎಂದು ಭರತ್ಗೆ ಎಚ್ಚರಿಕೆ ನೀಡಿದ್ದಲ್ಲದೇ, ಕೊಲೆ ಬೆದರಿಕೆಯೊಡ್ಡಿದ್ದ. ಈ ವಿಷಯ ತಿಳಿದ ಭರತ್ ಹಾಗೂ ಆತನ ಸ್ನೇಹಿತರು, ದತ್ತಾತ್ರೇಯನನ್ನು ಮಾರುತಿ 800 ಕಾರಿನಲ್ಲಿ ರಾಚಮಾನಹಳ್ಳಿಯ ನಿರ್ಮಾಣ ಹಂತದ ಮನೆಯೊಂದರ ಬಳಿ ಕರೆದುಕೊಂಡು ಹೋಗಿ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಬಳಿಕ ಆತನ ಶವವನ್ನು ಚಿಕ್ಕಮರಳವಾಡಿ ರಸ್ತೆಯ ಪಾಳು ಮನೆಯಲ್ಲಿ ಬಿಸಾಡಿ ಪರಾರಿಯಾಗಿದ್ದರು.
ಕಳೆದ ಸೆಪ್ಟೆಂಬರ್ 11ರಂದು ಕೆಲಸಕ್ಕೆ ತೆರಳಿದ್ದ ದತ್ತಾತ್ರೇಯ ವಾಪಸ್ ಮನೆಗೆ ಬಾರದ ಹಿನ್ನೆಲೆ, ಆತನ ಸಹೋದರ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಅತ್ತಿಬೆಲೆ ಪೊಲೀಸರು, ದತ್ರಾತ್ರೇಯ ಕೊಲೆಗೀಡಾಗಿರುವುದು ತಿಳಿದುಬಂದಿದೆ. ತಮಿಳುನಾಡಿನ ಹೊಸೂರಿನಲ್ಲಿ ಆರೋಪಿಗಳನ್ನು ಸೆರೆಹಿಡಿದಿದ್ದಾರೆ. ಬಂಧಿತರನ್ನು ಆನೇಕಲ್ ಪಟ್ಟಣದ ಭರತ್(26), ಉದಯ್ (24) ಮತ್ತು ರಾಚಮಾನಹಳ್ಳಿಯ ಆನಂದ್ (30) ಎಂದು ಗುರುತಿಸಲಾಗಿದೆ.