ಆನೇಕಲ್ (ಬೆಂಗಳೂರು):ಅತ್ತಿಬೆಲೆ ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಈವರೆಗೆ 14 ಜನ ಮೃತಪಟ್ಟಿರುವುದು ದೃಢಪಟ್ಟಿದ್ದು, ಎಲ್ಲರ ಮೃತದೇಹಗಳು ಪತ್ತೆಯಾಗಿವೆ. ಮೃತರೆಲ್ಲರೂ ತಮಿಳುನಾಡಿನವರಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ನವೀನ್, ರಾಜೇಶ್ ವೆಂಕಟೇಶ್, ಸಂಜಯ್, ರಾಜೇಶ್, ಚಂದ್ರು ಹಾಗೂ ಪಾಲ್ ಕಬೀರ್ ಎಂಬವರನ್ನು ಬೆಂಗಳೂರಿನ ಆಕ್ಸ್‌ಫರ್ಡ್ ಹಾಗೂ ಸೇಂಟ್ ಜಾನ್ಸ್ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಕೇಂದ್ರ ವಲಯ ಐಜಿಪಿ ಡಾ.ಬಿ.ಆರ್.ರವಿಕಾಂತೇಗೌಡ ಪ್ರತಿಕ್ರಿಯಿಸಿ, "ಮೃತರಲ್ಲಿ 9 ಜನರ ಗುರುತು ಸದ್ಯಕ್ಕೆ ಸಿಕ್ಕಿದೆ. ಇನ್ನೂ ಮೂರು ಜನ ಮೃತರ ಗುರುತು ಪತ್ತೆಯಾಗಿಲ್ಲ. ಗಾಯಾಳುಗಳ ಪೈಕಿ ವೆಂಕಟೇಶ್ ಎಂಬಾತನ ಪರಿಸ್ಥಿತಿ ಗಂಭೀರವಾಗಿದೆ. ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಾಲಾಜಿ ಕ್ರ್ಯಾಕರ್ಸ್‌ನ ನಿರ್ಲಕ್ಷ್ಯದಿಂದ ಅವಘಡ ಸಂಭವಿಸಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ" ಎಂದು ಹೇಳಿದರು.
"ಅಗ್ನಿಶಾಮಕ ಇಲಾಖೆಯ ಸುರಕ್ಷತಾ ನಿಯಮ ಉಲ್ಲಂಘನೆ ಮಾಡಲಾಗಿದೆ. ಮಿತಿಮೀರಿ ಪಟಾಕಿ ಸಂಗ್ರಹಿಸಲಾಗಿತ್ತಾ? ಏನೆಲ್ಲಾ ನಿಯಮ ಉಲ್ಲಂಘನೆ ಮಾಡಲಾಗಿದೆ ಎಂಬುದರ ಕುರಿತು ಸಮಗ್ರ ತನಿಖೆ ನಡೆಸಲಾಗುತ್ತಿದೆ. ಈಗಾಗಲೇ ಅತ್ತಿಬೆಲೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಟಾಕಿ ಗೋದಾಮಿಗೆ ಪರವಾನಗಿ ಪಡೆದಿದ್ದ ರಾಮಸ್ವಾಮಿ ರೆಡ್ಡಿ ಎಂಬವರ ಮಗ ನವೀನ್ ನನ್ನು ವಶಕ್ಕೆ ಪಡೆಯಲಾಗಿದೆ. ಆತನಿಗೂ ಸಹ ಗಾಯಗಳಾಗಿವೆ. ಆತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಾನೂನು ಪ್ರಕಾರ ಏನು ಕ್ರಮ ಕೈಗೊಳ್ಳಬೇಕೋ ಅದನ್ನು ತೆಗೆದುಕೊಳ್ಳಲಾಗುತ್ತದೆ" ಎಂದು ಸ್ಪಷ್ಟಪಡಿಸಿದರು.
"ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು, ಅಗ್ನಿಶಾಮಕ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಅವರ ವರದಿ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಪರವಾನಗಿದಾರರ ವಿರುದ್ಧ ಮೊದಲು ಕ್ರಮ ಕೈಗೊಳ್ಳಲಾಗುತ್ತದೆ. ನಂತರ ಪಟಾಕಿ ಯಾರು ಕಳುಹಿಸಿದ್ದಾರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು" ಎಂದರು.
"ತಮಿಳುನಾಡಿನ ಧರ್ಮಪುರಿಯಿಂದ ಲೇಬರ್ ಕಾಂಟ್ರ್ಯಾಕ್ಟರ್ ಮೂಲಕ ಪಟಾಕಿ ತರಿಸಲಾಗಿತ್ತು ಎಂಬ ಮಾಹಿತಿ ಇದೆ. ಆತನನ್ನು ವಿಚಾರಣೆ ಮಾಡಿ ಮಾಹಿತಿ ಪಡೆಯಲಿದ್ದೇವೆ. ಪಟಾಕಿಗೆ ಬೇಡಿಕೆ ಬಂದ ಮೇಲೆ ಇಲ್ಲಿಂದ ಒಂದಿಷ್ಟು ದಾಖಲೆಗಳನ್ನು ಪಡೆದು ನಂತರ ಪೂರೈಸಬೇಕು. ಪಟಾಕಿ ಸಾಗಣೆ ಸಂದರ್ಭದಲ್ಲಿ ಸಹ ಪ್ರಮಾಣಿತ ಕಾರ್ಯಾಚರಣೆಯ ವಿಧಾನ (SOP) ಅನುಸರಿಬೇಕು. ಇದೆಲ್ಲವನ್ನೂ ಪಾಲಿಸಲಾಗಿದೆಯಾ ಎಂಬ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ನಿರ್ಲಕ್ಷ್ಯ ವಹಿಸಿದವರ ವಿರುದ್ದ ಕ್ರಮ ಕೈಗೊಳ್ಳಲಾಗುತ್ತದೆ" ಎಂದು ವಿವರ ನೀಡಿದರು.
ಮಾಹಿತಿ ಪಡೆದ ಕೃಷ್ಣಗಿರಿ ಜಿಲ್ಲಾಧಿಕಾರಿ:ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಡಿಸಿ ದಯಾನಂದ್ ಭೇಟಿ ನೀಡಿ ಪರಿಶೀಲಿಸಿದರು. "2018ರಲ್ಲಿ ಗೋದಾಮಿಗೆ ಪರವಾನಗಿ ಪಡೆಯಲಾಗಿದೆ. ಪ್ರತಿ ಎರಡು ವರ್ಷಕ್ಕೆ ಪರವಾನಗಿ ನವೀಕರಣ ಮಾಡಬೇಕು. ಅದನ್ನು ಮಾಡಿರುವ ಮಾಹಿತಿ ಸದ್ಯಕ್ಕಿದೆ. ಆದ್ರೆ ನಂತರ ಕೆಲ ನಿಯಮಗಳನ್ನು ಪಾಲಿಸಬೇಕು. ಸಂಗ್ರಹಣಾ ಸಾಮರ್ಥ್ಯದ ಬಗ್ಗೆ ನಿಯಮ ಪಾಲನೆ ಮಾಡಲಾಗಿದೆಯೇ ಎಂದು ಪರಿಶೀಲಿಸಬೇಕಿದೆ. ಬಹುಶಃ ಹೆಚ್ಚಿನ ಮಟ್ಟದಲ್ಲಿ ಪಟಾಕಿ ಸಂಗ್ರಹ ಮಾಡಿರುವುದು ಇಷ್ಟು ದೊಡ್ಡ ಅವಘಡಕ್ಕೆ ಕಾರಣವಾದಂತಿದೆ" ಎಂದು ಅವರು ಮಾಹಿತಿ ನೀಡಿದರು.
ಇಂದು ಸಿಎಂ ಭೇಟಿ, ಪರಿಶೀಲನೆ:ಘಟನಾ ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಬೆಳಗ್ಗೆ ಭೇಟಿ ನೀಡುವರು. ಮೈಸೂರು ಪ್ರವಾಸದಲ್ಲಿರುವ ಸಿಎಂ ಭಾನುವಾರ ಬೆಳಗ್ಗೆ ನೇರವಾಗಿ ಅತ್ತಿಬೆಲೆ ದುರಂತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಈಗಾಗಲೇ ಸಿಎಂ ಅವಘಡ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಸಮಗ್ರ ಮಾಹಿತಿ ಸಂಗ್ರಹಿಸಿ ಸಂಪೂರ್ಣ ಪರಿಶೀಲನೆ ನಡೆಸಿದ ಬಳಿಕ ಮುಂದಿನ ಕ್ರಮಗಳ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಸಿಎಂ ಸಂತಾಪ:ಘಟನೆ ಸಂಬಂಧ ಎಕ್ಸ್ ಪೋಸ್ಟ್ ಮಾಡಿರುವ ಸಿಎಂ, 'ಬೆಂಗಳೂರು ನಗರ ಜಿಲ್ಲೆ ಆನೇಕಲ್ ಸಮೀಪ ಅತ್ತಿಬೆಲೆಯ ಪಟಾಕಿ ಸಂಗ್ರಹ ಮಳಿಗೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 12 ಮಂದಿ ಮೃತಪಟ್ಟ ಸುದ್ದಿ ತಿಳಿದು ಅತೀವ ನೋವಾಯಿತು. ದುರ್ಘಟನೆ ನಡೆದ ಸ್ಥಳಕ್ಕೆ ನಾಳೆ ಭೇಟಿ ನೀಡಿ, ಪರಿಶೀಲನೆ ನಡೆಸಲಿದ್ದೇನೆ. ಮೃತ ಕಾರ್ಮಿಕರ ಕುಟುಂಬಕ್ಕೆ ನನ್ನ ಸಂತಾಪಗಳು' ಎಂದಿದ್ದಾರೆ.
ಇದನ್ನೂಓದಿ:ಅತ್ತಿಬೆಲೆ ಪಟಾಕಿ ಗೋದಾಮಿನಲ್ಲಿ ದುರಂತ.. ಅವಘಡಕ್ಕೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ: ಡಿಜಿ ಕಮಲ್ ಪಂತ್