ಮಟಮಟ ಮಧ್ಯಾಹ್ನವೇ ಶಾಲಾ ಮಕ್ಕಳ ಅಪಹರಣಕ್ಕೆ ಯತ್ನ ದೊಡ್ಡಬಳ್ಳಾಪುರ: ಊಟದ ಸಮಯದಲ್ಲಿ ಶಾಲಾ ಮಕ್ಕಳು ಹೊರಗೆ ಬಂದಿದ್ದು, ಈ ವೇಳೆ ಬೈಕ್ನಲ್ಲಿ ಬಂದಿದ್ದ ಕಿಡಿಗೇಡಿಗಳು ಮಕ್ಕಳನ್ನು ಅಪಹರಿಸಿದ್ದಾರೆ. ಆದರೆ ಮಕ್ಕಳು ವಿರೋಧಿಸಿದಾಗ ಅವರನ್ನು ಅಲ್ಲಿಯೇ ಬಿಟ್ಟು ಕಿಡಿಗೇಡಿಗಳು ಪರಾರಿಯಾಗಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಚಿಕ್ಕ ತುಮಕೂರು ಗ್ರಾಮದಲ್ಲಿ ಇಂದು ಮಧ್ಯಾಹ್ನ 2 ಗಂಟೆ ಸಮಯದಲ್ಲಿ ಘಟನೆ ನಡೆದಿದ್ದು, ಶಾಲಾ ಮಕ್ಕಳ ಅಪಹರಣ ಯತ್ನ ಪ್ರಕರಣ ಇಡೀ ಗ್ರಾಮವನ್ನೇ ಬೆಚ್ಚಿ ಬೀಳುವಂತೆ ಮಾಡಿದೆ. ಮಂಗಳವಾರ ಶಾಲೆಯಲ್ಲಿ ಮಕ್ಕಳಿಗೆ ಸಮವಸ್ತ್ರವನ್ನು ವಿತರಣೆ ಮಾಡಲಾಗಿತ್ತು. ಶಾಲೆಯ ಇಬ್ಬರು ವಿದ್ಯಾರ್ಥಿಗಳು ಸಹೋದರರಾಗಿದ್ದು, ಸಮವಸ್ತ್ರವನ್ನು ಮನೆಯಲ್ಲಿ ಇಟ್ಟು ಬರಲು ಮನೆಯತ್ತ ನಡೆದಿದ್ದಾರೆ. ಈ ವೇಳೆ ಬೈಕ್ನಲ್ಲಿ ಬಂದಿದ್ದ ಮುಸುಕುಧಾರಿಗಳಿಬ್ಬರು ಸಹೋದರರನ್ನು ಬಲವಂತವಾಗಿ ಬೈಕ್ನಲ್ಲಿ ಕೂರಿಸಿಕೊಂಡು ಅಪಹರಣ ಮಾಡಲು ಯತ್ನಿಸಿದ್ದಾರೆ.
ಆದರೆ ಗುರುದತ್ ಬಲವಾಗಿ ವಿರೋಧಿಸಿದ್ದಲ್ಲದೆ ಕಲ್ಲಿನಿಂದ ಹೊಡೆಯಲು ಮುಂದಾಗಿದ್ದಾನೆ. ಇದರಿಂದ ಬೆದರಿದ ಅಪಹರಣಕಾರರು ಮಕ್ಕಳನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಪರಾರಿಯಾಗುವ ಮುನ್ನ ಪೊಲೀಸರಿಗೆ ದೂರು ನೀಡದಂತೆ ಎಚ್ಚರಿಕೆಯನ್ನು ನೀಡಿ ಹೋಗಿದ್ದಾರೆ. ಈ ಇಬ್ಬರು ವಿದ್ಯಾರ್ಥಿಗಳು ಸಿದ್ದರಾಜು ಹಾಗೂ ಶಾಂತಮ್ಮ ದಂಪತಿಯ ಮಕ್ಕಳು. ಘಟನೆಗೆ ಸಂಬಂಧಿಸಿದಂತೆ ಸಿದ್ದರಾಜು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಘಟನೆ ಬಗ್ಗೆ ಶಾಲೆಯ ಮುಖ್ಯಶಿಕ್ಷಕ ನರಸಿಂಹ ರಾಜು ಅವರು ಮಾಹಿತಿ ನೀಡಿ, ಇಂದು ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಮಾಡಿದ್ದು, ಮಧ್ಯಾಹ್ನ ಊಟಕ್ಕೆ ಬಿಟ್ಟ ವೇಳೆ ಈ ಇಬ್ಬರು ಸಹೋದರರು ಸಮವಸ್ತ್ರ ಅದಲು ಬದಲು ಆಗುತ್ತದೆ. ಮನೆಯಲ್ಲಿ ಇಟ್ಟು ಬರುತ್ತೇವೆ ಎಂದು ಹೋಗಿದ್ದಾರೆ. ಶಾಲೆ ಆವರಣದಿಂದ ಹೋದ ಸುಮಾರು ಹತ್ತು ನಿಮಿಷಕ್ಕೆ ಬೈಕ್ನಲ್ಲಿ ಬಂದ ಇಬ್ಬರು ವಿದ್ಯಾರ್ಥಿಗಳನ್ನು ಅಪಹರಿಸಿ, ಸುಮಾರು ನೂರು ಮೀಟರ್ ದೂರ ಕರೆದುಕೊಂಡು ಹೋಗಿದ್ದಾರೆ. ಆಮೇಲ ಮಕ್ಕಳೆಲ್ಲಾ ಸೇರಿ ಗಲಾಟೆ ಮಾಡಿದಾಗ ಹುಡುಗರನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ. ಈ ಮಕ್ಕಳು ನಮ್ಮ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಸಿದ್ದರಾಜು ಅವರ ಮಕ್ಕಳು, ಈ ವಿಷಯವನ್ನು ತಕ್ಷಣವೇ ಅವರಿಗೆ ತಿಳಿಸಿದ್ದೇವೆ. ಅವರು ಬಂದ ಕೂಡಲೇ ಬಿಇಓ ಅವರ ಸೂಚನೆ ಮೇರೆಗೆ ಮೊದಲು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ನಂತರ ಹೆತ್ತವರಿಂದಲೂ ಒಂದು ದೂರಿನ ಪತ್ರವನ್ನು ಶಾಲೆಗೆ ಬರೆಸಿಕೊಂಡಿದ್ದೇನೆ ಎಂದು ತಿಳಿಸಿದರು.
ಇದನ್ನೂ ಓದಿ :ಎಂಡೋಸಲ್ಫಾನ್ ಬಾಧಿತ ಯುವತಿ ಮೇಲೆ ಲೈಂಗಿಕ ದೌರ್ಜನ್ಯ: ಅಪರಾಧಿಗೆ 10 ವರ್ಷ ಜೈಲು ಶಿಕ್ಷೆ