ನೆಲಮಂಗಲ: ದಾರಿ ಹೋಕರ ಸೋಗಿನಲ್ಲಿ ಅಲೆದಾಡುತ್ತಿದ್ದ ಗ್ಯಾಂಗ್‌ವೊಂದು ಮನೆಯಲ್ಲಿ ಯಾರು ಇಲ್ಲದ್ದನ್ನು ಗಮನಿಸಿ ಹಣ ಎಗರಿಸಲು ಮುಂದಾಗಿದೆ. ಈ ಸಂದರ್ಭದಲ್ಲಿ ಓರ್ವ ಮಹಿಳೆ ಸ್ಥಳೀಯರ ಕೈಗೆ ಸಿಕ್ಕಿಬಿದ್ದು ಧರ್ಮದೇಟು ತಿಂದಿದ್ದಾಳೆ. ಬಳಿಕ ಪೊಲೀಸರ ಅತಿಥಿಯೂ ಆಗಿದ್ದಾಳೆ.
ಬೆಂಗಳೂರು ಉತ್ತರ ತಾಲೂಕು ಚಿಕ್ಕಬಿದುರಕಲ್ಲು ಗ್ರಾಮದಲ್ಲಿ ಘಟನೆ ನಡೆದಿದೆ. ಚಿಕ್ಕಬಿದುರಕಲ್ಲು ಗ್ರಾಮದ ಕವಿತಾ ನಿನ್ನೆ ಸಂಜೆ ಪಕ್ಕದ ಮನೆಗೆ ಹೋಗಿದ್ದಾಗ ಆರು ಜನರ ತಂಡ ಏಕಾಏಕಿ ಮನೆಗೆ ನುಗ್ಗಿದ್ದಾರೆ. ಮನೆಯಲ್ಲಿದ್ದ ಪರ್ಸ್‌ನಲ್ಲಿ 1 ಲಕ್ಷದ 90 ಸಾವಿರ ಹಣ ಇತ್ತು. ಅದರಲ್ಲಿ 50 ಸಾವಿರ ಹಣಕ್ಕೆ ಕೈಹಾಕಿ ಪರಾರಿಯಾಗ್ತಿದ್ರು. ಈ ವೇಳೆ ಆರು ಜನರಲ್ಲಿ ಓರ್ವ ಮಹಿಳೆ ಸಿಕ್ಕಿಬಿದ್ದಿದ್ದು ಆಕೆಗೆ ಧರ್ಮದೇಟು ಕೊಟ್ಟಿದ್ದಾರೆ.
ಕಳ್ಳರ ತಂಡದ ಆರು ಜನರು ಮಹಾರಾಷ್ಟ್ರದ ಪುಣೆ ಮೂಲದವರು. ಸಿಕ್ಕಿಬಿದ್ದ ಮಹಿಳೆಯನ್ನು ಸೋನು ಎಂದು ಗುರುತಿಸಲಾಗಿದೆ. ಮಕ್ಕಳನ್ನು ಕಂಕುಳದಲ್ಲಿ ಎತ್ತಿಕೊಂಡು ಏರಿಯಾಗಳಲ್ಲಿ ತಿರುಗಾಡುತ್ತಾ, ಮನೆಯಲ್ಲಿ ಯಾರೂ ಇರದ ಸಂದರ್ಭದಲ್ಲಿ ದರೋಡೆ ಮಾಡುತ್ತಿದ್ದರು ಎನ್ನಲಾಗಿದೆ. ಈ ಪೈಕಿ ಐವರು ಪರಾರಿಯಾಗಿದ್ದು, ಓಡಿಹೋಗುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ. ಪರಾರಿಯಾಗಿರುವ ಐವರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.
ತುಮಕೂರು ಅಪರಾಧ ಸುದ್ದಿ:ಇಬ್ಬರು ವ್ಯಕ್ತಿಗಳು ಕರ್ತವ್ಯನಿರತ ಇಬ್ಬರು ಪೊಲೀಸರ ಕೈಯಲ್ಲಿದ್ದ ಲಾಠಿ ಕಿತ್ತುಕೊಂಡು ಹಲ್ಲೆ ನಡೆಸಿರುವ ಘಟನೆ ಕಳೆದ ರಾತ್ರಿ ಕುಣಿಗಲ್ ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೊನಿಯಲ್ಲಿ ನಡೆದಿದೆ. ಘಟನೆ ಸಂಬಂಧಿಸಿದಂತೆ ಗ್ರಾಮಲೆಕ್ಕಿಗ ಸೇರಿದಂತೆ ಇಬ್ಬರು ಆರೋಪಿಗಳನ್ನು ಕುಣಿಗಲ್ ಪೊಲೀಸರು ಬಂಧಿಸಿದ್ದಾರೆ. ಕುಣಿಗಲ್ ಪೊಲೀಸ್ ಠಾಣೆಯ ಕಾನ್ಸ್ಟೆಬಲ್ಗಳಾದ ಮಿಥುನ್, ಸುಮನ್ ಅವರ ಮೇಲೆ ಹೌಸಿಂಗ್ ಬೋರ್ಡ್ ಕಾಲೊನಿ ನಿವಾಸಿಗಳಾದ ಗ್ರಾಮಲೆಕ್ಕಿಗ ವೆಂಕಟೇಶ್ ಹಾಗೂ ರಾಮಚಂದ್ರ ಹಲ್ಲೆ ಮಾಡಿರುವ ವ್ಯಕ್ತಿಗಳು ಎಂದು ತಿಳಿದು ಬಂದಿದೆ.