ದೊಡ್ಡಬಳ್ಳಾಪುರ:ಕೊಲೆ ಬೆದರಿಕೆ, ಕೊಲೆ ಯತ್ನ, ಹಲ್ಲೆ, ಸರ್ಕಾರಿ ಅಧಿಕಾರಿಗಳ ಕೆಲಸಕ್ಕೆ ಅಡ್ಡಿ ಸೇರಿದಂತೆ 8 ಪ್ರಕರಣಗಳಲ್ಲಿ ಭಾಗಿಯಾಗಿದ್ದ ವ್ಯಕ್ತಿಯನ್ನು ದೊಡ್ಡಬೆಳವಂಗಲ ಪೊಲೀಸರು ಗೂಂಡಾ ಕಾಯ್ದೆಯಡಿ ಬಂಧಿಸಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕು ಕಾಡನೂರು ಪಾಳ್ಯದ ನಿವಾಸಿ ಶಿವಶಂಕರ್ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಯಲ್ಲಿ ಈತನ ಮೇಲೆ 8 ಪ್ರಕರಣಗಳಿವೆ.
ಹಲ್ಲೆ, ಕೊಲೆ ಬೆದರಿಕೆ, ಕೊಲೆ ಯತ್ನ, ಸರ್ಕಾರಿ ಅಧಿಕಾರಿಗಳ ಕೆಲಸಕ್ಕೆ ಅಡ್ಡಿ ಸೇರಿದಂತೆ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಸಾರ್ವಜನಿಕರ ನೆಮ್ಮದಿಗೆ ಭಂಗತರುವ ಮೂಲಕ ಸಾರ್ವಜನಿಕರ ಅಕ್ರೋಶಕ್ಕೆ ಕಾರಣವಾಗಿದ್ದ. ಸಾಮಾನ್ಯ ಕಾಯ್ದೆಗಳಿಂದ ಈತನ ಸಮಾಜ ದ್ರೋಹಿ ಕೆಲಸಕ್ಕೆ ಕಡಿವಾಣ ಹಾಕಲು ಸಾಧ್ಯವಾಗದೆ ಇದ್ದರಿಂದ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ಆರೋಪಿ ಶಿವಶಂಕರ್ ವಿರುದ್ಧ ಗೂಂಡಾ ಕಾಯ್ದೆ ಜಾರಿ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆಗೆ ಕಳಿಸಲಾಗಿತ್ತು.
ದಿನಾಂಕ 07-11-2020 ರಂದು ಆರೋಪಿ ಶಿವಶಂಕರ್ ವಿರುದ್ಧ ಗೂಂಡಾ ಕಾಯ್ದೆ ಜಾರಿ ಮಾಡಲಾಗಿದ್ದು, ದೊಡ್ಡಬಳ್ಳಾಪುರ ಪೊಲೀಸರು ಈತನನ್ನು ಬಂಧಿಸಿ ಬೆಂಗಳೂರು ನಗರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದಾರೆ.