ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ) : ಇಲ್ಲಿನ ಕೆರೆಗಳು ವಿವಿಧ ತ್ಯಾಜ್ಯ ಮತ್ತು ಕೈಗಾರಿಕಾ ತ್ಯಾಜ್ಯದಿಂದ ವಿಷಯುಕ್ತವಾಗಿವೆ ಎಂದು ಸಾರ್ವಜನಿಕರು ಹಸಿರು ಪೀಠಕ್ಕೆ ಅರ್ಜಿ ಸಲ್ಲಿಸಿದ್ದು, ಈ ಸಂಬಂಧ ಹಸಿರು ಪೀಠದ ಆದೇಶದಂತೆ ಜಿಲ್ಲಾಧಿಕಾರಿ ಲತಾ ಅವರು ಕೆರೆಗಳನ್ನು ವೀಕ್ಷಣೆ ಮಾಡಿ ಅಧಿಕಾರಿಗಳಿಗೆ ಶಾಶ್ವತ ಪರಿಹಾರ ನೀಡುವಂತೆ ಸೂಚಿಸಿದ್ದಾರೆ.
ಅರ್ಕಾವತಿ ನದಿ ಪಾತ್ರದ ಕೆರೆಗಳು ನಗರದ ಒಳಚರಂಡಿ ನೀರು, ಬಾಶೆಟ್ಟಿಹಳ್ಳಿ ಕೈಗಾರಿಕೆಗಳ ವಿಷಯುಕ್ತ ನೀರಿನಿಂದ ಕಲುಷಿತವಾಗಿದೆ. ಈ ಕೆರೆಗಳನ್ನು ಸಂರಕ್ಷಣೆ ಮಾಡುವಂತೆ ದೊಡ್ಡಬಳ್ಳಾಪುರದ ಗಿರೀಶ್ ಎನ್.ಪಿ ಎಂಬವರು ಅರ್ಜಿ ಸಲ್ಲಿಸಿದರು. ಈ ಬಗ್ಗೆ ಕೆರೆಗಳಿಗೆ ಭೇಟಿ ನೀಡಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಹಸಿರು ಪೀಠ ಆದೇಶ ನೀಡಿತ್ತು. ಆದೇಶದನ್ವಯ ಜಿಲ್ಲಾಧಿಕಾರಿ ಆರ್. ಲತಾ ಅವರು ದೊಡ್ಡಬಳ್ಳಾಪುರದ ನಾಗರಕೆರೆ, ಚಿಕ್ಕ ತುಮಕೂರಿನ STP ಘಟಕ ಮತ್ತು ದೊಡ್ಡ ತುಮಕೂರು ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ದೊಡ್ಡಬಳ್ಳಾಪುರದ 26 ವಾರ್ಡುಗಳಲ್ಲಿ ಮಾತ್ರ ಯುಜಿಡಿ ಸಂಪರ್ಕವಿದೆ. ಇನ್ನುಳಿದ ಐದು ವಾರ್ಡುಗಳಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲದೆ ನೇರವಾಗಿ ತ್ಯಾಜ್ಯ ನೀರು ಕೆರೆ ಸೇರುತ್ತಿದೆ. ಈಗಿರುವ ಒಳಚರಂಡಿ ವ್ಯವಸ್ಥೆಯೂ ಅಸಮರ್ಪಕವಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಡಿಪಿಆರ್ ಸಿದ್ಧ ಪಡಿಸುವಂತೆ ಸೂಚಿಸಲಾಗಿದೆ. ನವೀನ ತಂತ್ರಜ್ಞಾನದಲ್ಲಿ STP ಘಟಕ ನಿರ್ಮಿಸಲು ಸೂಚನೆ ನೀಡಲಾಗಿದೆ. ಸಂಸ್ಕರಿಸದೆ ನೀರು ಹೊರ ಬಿಡುವ ಕೈಗಾರಿಕೆಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅರ್ಕಾವತಿ ನದಿ ಪಾತ್ರದ ಕೆರೆಗಳನ್ನು ವೀಕ್ಷಿಸಿದ ಜಿಲ್ಲಾಧಿಕಾರಿ ದೊಡ್ಡಬಳ್ಳಾಪುರ ನಗರಸಭೆ ಅಧಿಕಾರಿಗಳು ಜಿಲ್ಲಾಧಿಕಾರಿಗಳು ಬರುವ ಮುನ್ನ ಕೆರೆಯ ಬಳಿ ಸ್ವಚ್ಛತಾ ಕಾರ್ಯವನ್ನು ಕೈಗೆತ್ತಿಕೊಂಡಿದ್ದರು. ನಗರಸಭೆಯು ಕೆರೆಯ ಸ್ವಚ್ಛತೆ ವಿಚಾರದಲ್ಲಿ ಸತ್ಯವನ್ನು ಮುಚ್ಚಿಡುವ ಪ್ರಯತ್ನ ನಡೆಸಿದೆ ಎಂದು ಪರಿಸರ ಪ್ರೇಮಿ ಚಿದಾನಂದ್ ಆರೋಪಿಸಿದ್ದಾರೆ.
ಇದನ್ನೂ ಓದಿ :'ಅಂಗನವಾಡಿ ಕೇಂದ್ರಗಳಲ್ಲಿಯೇ ಪೂರ್ವ ಪ್ರಾಥಮಿಕ ಶಿಕ್ಷಣ ಪ್ರಾರಂಭಿಸಬೇಕು'