ಆನೇಕಲ್: (ಬೆಂಗಳೂರು ಗ್ರಾಮಾಂತರ): ಆನೇಕಲ್ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿ.ಶಿವಣ್ಣ ಅಪಾರ ಜನಸ್ತೋಮದೊಂದಿಗೆ ಮಂಗಳವಾರ ನಾಮಪತ್ರ ಸಲ್ಲಿಸಿದರು. ಮೂಲತಃ ಹುಳಿಮಾವು ನಿವಾಸಿಯಾಗಿರುವ ಬಿ.ಶಿವಣ್ಣ, ಆನೇಕಲ್ ಮೀಸಲು ಕ್ಷೇತ್ರದಿಂದ ಸತತ ಎರಡು ಬಾರಿ ಶಾಸಕರಾಗಿದ್ದರು. ಈಗ ಮೂರನೇ ಬಾರಿಯೂ ಕಣಕ್ಕಿಳಿಯತ್ತಿದ್ದು, ಗೆಲುವಿನ ವಿಶ್ವಾಸದಲ್ಲಿದ್ದಾರೆ. ಆನೇಕಲ್ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿದೆ.
ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿ.ಶಿವಣ್ಣ ಅವರು ಸಂಸದ ಡಿ.ಕೆ.ಸುರೇಶ್, ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ ಮತ್ತಿತರ ನಾಯಕರೊಂದಿಗೆ ನಾಮಪತ್ರ ಸಲ್ಲಿಸಿದರು. ನಾಮಪತ್ರದಲ್ಲಿ ಒಟ್ಟು ಕುಟುಂಬದ ಚರಾಸ್ತಿ, ಸ್ಥಿರಾಸ್ತಿ ಸೇರಿ 5 ಕೋಟಿ 7 ಲಕ್ಷ 72 ಸಾವಿರದ 752 ರೂ ದಾಖಲೆಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದಾರೆ.
ಕಾಂಗ್ರೆಸ್ ಬೃಹತ್ ಮೆರವಣಿಗೆಯಲ್ಲಿ ಸೇಬಿನ ಹಾರ, ವಿವಿಧ ಜಾನಪದ ಕಲಾ ಪ್ರಕಾರಗಳು ಜನಮನ ಸೆಳೆದವು. ಇಡೀ ದಿನ ಆನೇಕಲ್ ಪಟ್ಟಣದಲ್ಲಿ ಬಸ್ ಸಂಚಾರ ಅಸ್ತವ್ಯಸ್ತಗೊಂಡಿತು. ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು. ಬಿಎಸ್ಎಫ್ ತುಕಡಿ ನಿಯೋಜಿಸಲಾಗಿತ್ತು.
ಬಿ.ಶಿವಣ್ಣ ಮಾತನಾಡಿ, 2013ರಲ್ಲಿ ನಾಮಪತ್ರ ಸಲ್ಲಿಸಿ, ಆನೇಕಲ್ ಕ್ಷೇತ್ರದ ಜನತೆ ಅಭೂತಪೂರ್ವ ಬೆಂಬಲ ಕೊಟ್ಟು ಜಯಶೀಲನಾಗಿ ಮಾಡಿದ್ದರು. 2013ರಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು. 2008ರಲ್ಲಿ ನಮ್ಮ ಸರ್ಕಾರ ಇರಲಿಲ್ಲ. ಆದರೂ ಮೂಲಸೌಕರ್ಯಗಳಿಗೆ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ.