ಕರ್ನಾಟಕ

karnataka

By

Published : Jul 8, 2020, 4:42 PM IST

ETV Bharat / state

ವ್ಹೀಲ್​​ಚೇರ್​​ನಲ್ಲಿ ಪತ್ನಿಯನ್ನು ಕೂರಿಸಿಕೊಂಡು ಭಿಕ್ಷಾಟನೆ: ವೃದ್ಧ ದಂಪತಿಯ ಬದುಕಿಗೆ ನೆರವಾಗುವಿರಾ?

ಎರಡೂ ಕಾಲುಗಳನ್ನು ಕಳೆದುಕೊಂಡ ಪತ್ನಿಯನ್ನು ವ್ಹೀಲ್​ಚೇರ್​​ನಲ್ಲಿ ಕೂರಿಸಿಕೊಂಡು ಭಿಕ್ಷಾಟನೆ ನಡೆಸಿ ಜೀವನ ನಡೆಸುತ್ತಿರುವ ದೊಡ್ಡಬಳ್ಳಾಪುರದ ವೃದ್ಧ ದಂಪತಿ ಸಹೃದಯರ ನೆರವಿನ ನಿರೀಕ್ಷೆಯಲ್ಲಿದ್ದಾರೆ.

begging
ವೃದ್ಧ ದಂಪತಿ

ದೊಡ್ಡಬಳ್ಳಾಪುರ: ವೃದ್ಧಾಪ್ಯದಲ್ಲಿ ಮಕ್ಕಳ ಆರೈಕೆಯಲ್ಲಿ ಜೀವನ ನಡೆಸಬೇಕಾದ ಈ ಹಿರಿಜೀವಗಳ ಬದುಕು ಬೀದಿಗೆ ಬಿದ್ದಿದೆ. ಪತ್ನಿಗೆ ಎರಡೂ ಕಾಲಿಲ್ಲ. ಪತಿಗೆ ದುಡಿಯುವ ಶಕ್ತಿ ಇಲ್ಲ. ವ್ಹೀಲ್​​ಚೇರ್​​ನಲ್ಲಿ ಹೆಂಡತಿಯನ್ನು ಕೂರಿಸಿಕೊಂಡು ಭಿಕ್ಷೆಗೆ ಕೈಚಾಚಿ, ಅವರಿವರು ಕೊಡುವ ಹಣದಲ್ಲೇ ತಮ್ಮ ಬದುಕಿನ ಕೊನೆ ದಿನಗಳನ್ನು ಇವರು ಕಳೆಯುತ್ತಿದ್ದಾರೆ.

ಶ್ರೀನಿವಾಸ್ (75), ಆಂಜಿನಮ್ಮ (65) ದೊಡ್ಡಬಳ್ಳಾಪುರ ಹೊರವಲಯದ ಪಾಲನಜೋಗಹಳ್ಳಿಯ ನಿವಾಸಿಗಳು. ಚಿಕ್ಕಬಳ್ಳಾಪುರದ ಬಾಗೇಪಲ್ಲಿ ಮೂಲದ ಶ್ರೀನಿವಾಸ್ 40 ವರ್ಷಗಳ ಹಿಂದೆ ಕೆಲಸಕ್ಕಾಗಿ ಪತ್ನಿ ಜೊತೆ ದೊಡ್ಡಬಳ್ಳಾಪುರಕ್ಕೆ ವಲಸೆ ಬಂದಿದ್ದರು. ಗಾರೆ ಕೆಲಸ ಮಾಡಿಕೊಂಡು ಕುಟುಂಬವನ್ನು ಸಲಹುತ್ತಿದ್ದರು. ಅವರಿಗೆ ಇಬ್ಬರು ಮಕ್ಕಳೂ ಇದ್ದರು.

ವಯಸ್ಸಾದ ನಂತರ ಮಗ ನಮ್ಮನ್ನು ನೋಡಿಕೊಳ್ಳುತ್ತಾನೆ ಎಂದುಕೊಂಡಿದ್ದ ವೃದ್ಧ ದಂಪತಿಗೆ ಆಗಿದ್ದೇ ಬೇರೆ. ಮಗ ಕುಡಿತದ ದಾಸನಾಗಿ ಬಿಟ್ಟ. ಹೆಣ್ಣು ಮಗಳು ಈಗ ಪೋಷಕರ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಾಳೆ. ಆದರೆ, ಕಿತ್ತು ತಿನ್ನುವ ಬಡತನದಿಂದ ಆಕೆಗಿನ್ನೂ ಮದುವೆಯಾಗಿಲ್ಲ.

ಭಿಕ್ಷಾಟನೆ ಮಾಡುತ್ತಿರುವ ವೃದ್ಧ ದಂಪತಿ

ಕಳೆದ ಹತ್ತು ವರ್ಷಗಳಿಂದ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ ಆಂಜಿನಮ್ಮ, ಅದರಿಂದಾಗಿ ತನ್ನೆರಡೂ ಕಾಲುಗಳನ್ನು ಕಳೆದುಕೊಂಡಿದ್ದಾರೆ. ವೃದ್ಧ ಜೀವ ಶ್ರೀನಿವಾಸ್​ ಅವರಿಗೆ ರೆಟ್ಟೆಯಲ್ಲಿ ದುಡಿಯುವ ಬಲ ಕುಂದಿದೆ. ಹಾಗಂತ ಅವರು ಮನೆಯಲ್ಲೇ ಕುಳಿತು ಕಾಲ ಕಳೆದರೆ ಇಬ್ಬರೂ ಉಪವಾಸ ಸಾಯಬೇಕಾಗುತ್ತದೆ ಎಂದು ದಂಪತಿ ಭಿಕ್ಷೆಗಿಳಿದಿದ್ದಾರೆ.

ವೃದ್ಧ ದಂಪತಿ ಬದುಕಿನ ಸಂಧ್ಯಾಕಾಲವನ್ನು ತುಸು ನೆಮ್ಮದಿಯಿಂದ ಕಳೆಯಲು ದಾನಿಗಳ ಸಹಾಯ ಹಸ್ತದ ನಿರೀಕ್ಷೆಯಲ್ಲಿದ್ದಾರೆ. ಸಹೃದಯಿಗಳು ಪಾರ್ವತಮ್ಮ, ಮೊಬೈಲ್ ಸಂಖ್ಯೆ -9742982066 ಗೆ ಕರೆ ಮಾಡಿ ವಿಚಾರಿಸಿ ನೆರವು ನೀಡಬಹುದು.

ABOUT THE AUTHOR

...view details