ದೇವನಹಳ್ಳಿ(ಬೆಂಗಳೂರು): ತಾಲೂಕಿನ ಆವತಿ ಗ್ರಾಮ ಹಾಗೂ ಅನಂತ ವಿದ್ಯಾನಿಕೇತನ ಶಾಲೆಯ ಆವರಣದಲ್ಲಿ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಭಾಗವಹಿಸುವ ಕಾರ್ಯಕ್ರಮಗಳ ಸಿದ್ಧತೆ ಬಹುತೇಕ ಪೂರ್ಣಗೊಂಡಿದೆ. ಪೊಲೀಸ್ ಮಹಾನೀರಿಕ್ಷಕ ಎಂ.ಚಂದ್ರಶೇಖರ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಕಾರ್ಯಕ್ರಮದ ಸ್ಥಳಗಳು ಹಾಗೂ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿದರು.
ನಾಳೆ ಬೆಳಗ್ಗೆ 11 ಗಂಟೆಗೆ ಆವತಿ ಗ್ರಾಮದ 35 ಎಕರೆ ಪ್ರದೇಶದಲ್ಲಿ ಬ್ಯೂರೋ ಆಫ್ ಪೊಲೀಸ್ ರೀಸರ್ಚ್ ಅಂಡ್ ಡೆವಲಪ್‌ಮೆಂಟ್ (ಬಿ.ಪಿ.ಆರ್.ಡಿ.)ಸಂಸ್ಥೆಯಡಿ ಕಾರ್ಯನಿರ್ವಹಿಸುವ ಕೇಂದ್ರೀಯ ಪತ್ತೇದಾರಿ ತರಬೇತಿ ಶಾಲೆಯ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮ ನೆರವೇರಲಿದೆ. ಬೆಂಗಳೂರಿನ ಸೆಂಟ್ರಲ್ ಡಿಟೆಕ್ಟಿವ್ ಟ್ರೈನಿಂಗ್ ಇನ್ಸ್‌ಟಿಟ್ಯೂಟ್ (ಸಿಡಿಟಿಐ) ಸಂಸ್ಥೆಯನ್ನು ಅರ್ಬನ್ ಪೊಲೀಸಿಂಗ್ (ಸ್ಮಾರ್ಟ್ ಸಿಟಿ ಪೊಲೀಸಿಂಗ್) ಹಾಗೂ ಬ್ಲಾಕ್ ಚೈನ್ ತಂತ್ರಜ್ಞಾನದ ಉತ್ಕೃಷ್ಟತಾ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ.
ಈ ಕೇಂದ್ರದಲ್ಲಿ ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಸಿಪಿಓಗಳು ಹಾಗೂ ಸಿಎಪಿಎಫ್‌ಗಳ ಪೊಲೀಸ್ ಅಧಿಕಾರಿಗಳಿಗೆ ತರಬೇತಿ ಕೋರ್ಸ್‌ಗಳನ್ನು ನೀಡಲು ರೂಪಿಸಲಾಗಿದೆ. ಪೊಲೀಸ್ ಅಧಿಕಾರಿಗಳ ತನಿಖಾ ಗುಣಮಟ್ಟವನ್ನು ಸುಧಾರಿಸುವುದು ಇದರ ಪ್ರಮುಖ ಉದ್ದೇಶ. ಆವತಿ ಗ್ರಾಮದಲ್ಲಿ ಈ ಕೇಂದ್ರಕ್ಕಾಗಿ ರಾಜ್ಯ ಸರ್ಕಾರ 35 ಎಕರೆ ಭೂಮಿ ಒದಗಿಸಿದೆ.