ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಐಪಿ ಪಾರ್ಕಿಂಗ್ ಏರಿಯಾದಲ್ಲಿ ಸೇನಾಧಿಕಾರಿಗಳು ತಮ್ಮ ಕಾರನ್ನು ಪಾರ್ಕಿಂಗ್ ಮಾಡಲು ಮುಂದಾಗಿದ್ದಾರೆ. ಆದರೆ, ಸೆಕ್ಯೂರಿಟಿ ಗಾರ್ಡ್ಗಳು ಪಾರ್ಕಿಂಗ್ ಮಾಡಲು ನಿರಾಕರಿಸಿದ್ದಕ್ಕೆ, ಸೇನಾಧಿಕಾರಿಗಳು ಅವರ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.
ಈ ಸಂಬಂಧ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೆಪ್ಟೆಂಬರ್ 16 ರ ಬೆಳಗಿನ ಜಾವ 01:19 ರ ಸಮಯದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಐಪಿ ಡಿಪಾರ್ಚರ್ ಬಳಿ ಈ ಘಟನೆ ನಡೆದಿದೆ.
ಅಂದು ಸೇನಾಧಿಕಾರಿಗಳಾದ ಕ್ಯಾಪ್ಟನ್ ಠಾಕೂರ್ ಬರುವಾಲ್ ಮತ್ತು ಮೇಜರ್ ಪುಶೀಬ್ ರಜಪೂತ್ ಜಮ್ಮು ಮತ್ತು ಕಾಶ್ಮೀರ ನೋಂದಣಿ ಕಾರಿನಲ್ಲಿ ಬಂದಿದ್ದರು. ವಿಐಪಿ ಮತ್ತು ಸಿಐಎಸ್ಎಫ್ ಅಧಿಕಾರಿಗಳಿಗೆ ಮೀಸಲಾದ ಪಾರ್ಕಿಂಗ್ ಸ್ಥಳವಾದ ಲೇನ್ 1 ರಲ್ಲಿ ಪಾರ್ಕಿಂಗ್ ಮಾಡಲು ಮುಂದಾಗಿದ್ದಾರೆ. ಆದರೆ, ಸೆಕ್ಯೂರಿಟಿ ಗಾರ್ಡ್ ಗಳು ಕಾರು ಪಾರ್ಕಿಂಗ್ಗೆ ನಿರಾಕರಿಸಿದ್ದು, ಲೇನ್ 2 ರಲ್ಲಿ ಪಾರ್ಕಿಂಗ್ ಮಾಡಲು ಹೇಳಿದ್ದಾರೆ.
ಇದನ್ನೂ ಓದಿ:ಪೆಟ್ರೋಲ್ ಬಂಕ್ನಲ್ಲಿ ದರೋಡೆ; ಸೆಕ್ಯೂರಿಟಿ ಗಾರ್ಡ್ ಕೈ ಕಟ್ಟಿಹಾಕಿ ಹಲ್ಲೆ!
ಸೆಕ್ಯೂರಿಟಿ ಗಾರ್ಡ್ಗಳ ಮಾತಿನಿಂದ ಕೋಪಗೊಂಡ ಸೇನಾಧಿಕಾರಿಗಳು ಹಿಂದಿ ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ, ನೆಲಕ್ಕೆ ತಳ್ಳಿ ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದಾರೆ ಎನ್ನಲಾಗ್ತಿದೆ. ನಾಲ್ವರು ಸೆಕ್ಯೂರಿಟಿ ಗಾರ್ಡ್ಗಳ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಕರಣ ದಾಖಲಾಗಿದೆ.