ಟ್ಯಾಕ್ಸಿ ಚಾಲಕರಿಂದ ಕಳಪೆ ಆಹಾರ ಪೂರೈಕೆ ಆರೋಪ ದೇವನಹಳ್ಳಿ(ಬೆ.ಗ್ರಾಮಂತರ):ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪಾರ್ಕಿಂಗ್ ಪ್ರದೇಶದ ಕ್ಯಾಂಟೀನ್ನಲ್ಲಿ ಕಳಪೆ ಆಹಾರ ಪೂರೈಕೆ ಆರೋಪ ಕೇಳಿ ಬಂದಿದ್ದು, ಸಿಬ್ಬಂದಿಯನ್ನು ಟ್ಯಾಕ್ಸಿ ಚಾಲಕರು ತರಾಟೆಗೆ ತೆಗೆದುಕೊಂಡಿದ್ದಾರೆ.
ನಿಲ್ದಾಣದಲ್ಲಿ ಪ್ರತಿನಿತ್ಯ ಸಾವಿರಾರು ಟ್ಯಾಕ್ಸಿಗಳು ಸಂಚರಿಸುತ್ತವೆ. ಟ್ಯಾಕ್ಸಿಗಳನ್ನು ನಿಲ್ಲಿಸುವ ಪಾರ್ಕಿಂಗ್ ಏರಿಯಾದ ಕ್ಯಾಂಟೀನ್ನಲ್ಲಿ ಹಳಸಿದ ಕಳಪೆ ಆಹಾರ ಪೂರೈಕೆ ಮಾಡುತ್ತಿದ್ದಾರೆ ಎಂದು ಚಾಲಕರು ಆರೋಪಿಸಿದ್ದಾರೆ. ಅಲ್ಲದೆ ಕ್ಯಾಂಟೀನ್ಗೆ ಮುತ್ತಿಗೆ ಹಾಕಿ ಅಲ್ಲಿ ತಯಾರಾಗಿದ್ದ ತಿಂಡಿಗಳನ್ನು ಹೊರಗಡೆ ತಂದಿಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಸಾವಿರಾರು ಟ್ಯಾಕ್ಸಿ ಚಾಲಕರು ದಿನನಿತ್ಯ ತಮ್ಮ ತಿಂಡಿ, ಊಟವನ್ನು ಇದೇ ಕ್ಯಾಂಟೀನ್ನಲ್ಲಿ ಮಾಡುತ್ತಿದ್ದರು. ಆದರೆ ಇತ್ತೀಚೆಗೆ ಕೆಲ ದಿನಗಳಿಂದ ಉಳಿದ ಹಿಂದಿನ ಆಹಾರವನ್ನೇ ಬಿಸಿ ಮಾಡಿ ಕೊಡುತ್ತಿದ್ದಾರೆ. ಈ ಕುರಿತು ಈಗಾಗಲೇ ಆಹಾರ ಸುರಕ್ಷತಾ ನಿರೀಕ್ಷಕ ಅಧಿಕಾರಿಗಳ ಗಮನಕ್ಕೂ ತಂದಿದ್ದರೂ ಪ್ರಯೋಜನವಾಗಿಲ್ಲ. ಹೀಗಾಗಿ ಬುಧವಾರ ಬೆಳಿಗ್ಗೆ ಇಡ್ಲಿ ಚಟ್ನಿ ಸೇವಿಸಿದ ಚಾಲಕರು ರೊಚ್ಚಿಗೆದ್ದಿದ್ದು ಅಲ್ಲಿ ಮೊದಲೇ ತಯಾರಾಗಿದ್ದ ತಿಂಡಿ, ಹಿಟ್ಟು ಹೊರತಂದು ಸಾರ್ವಜನಿಕರ ಎದುರೇ ಗಲಾಟೆ ಮಾಡಿದರು.
ಇಂತಹ ಕಳಪೆ ಆಹಾರ ಕೊಡುವವರ ಟೆಂಡರ್ ರದ್ದು ಮಾಡಿ ಉತ್ತಮ ಆಹಾರ ನೀಡುವವರಿಗೆ ಟೆಂಡರ್ ನೀಡುವಂತೆ ಏಪೋರ್ಟ್ ಅಧಿಕಾರಿಗಳನ್ನು ಚಾಲಕರು ಆಗ್ರಹಿಸಿದ್ದಾರೆ. ದೇವನಹಳ್ಳಿ ಆಹಾರ ಸುರಕ್ಷತಾ ನಿರೀಕ್ಷಕ ಪ್ರವೀಣ್ ಕ್ಯಾಂಟಿನ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಳಿಗ್ಗೆಯಿಂದ ತಯಾರಾಗಿದ್ದ ತಿಂಡಿಗಳು ಹಾಗೂ ಆಹಾರ ಪದಾರ್ಥಗಳ ಸ್ಯಾಂಪಲ್ ಪಡೆದು ಬೆಂಗಳೂರಿನ ಲ್ಯಾಬ್‌ಗೆ ಕಳುಹಿಸಿದ್ದಾರೆ. ಏಪೋರ್ಟ್ ಆಡಳಿತ ಮಂಡಳಿ ಅಧಿಕಾರಿಗಳು ಕ್ಯಾಂಟಿನ್ ಟೆಂಡರ್ ಪಡೆದಿದ್ದ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ.
ಟ್ಯಾಕ್ಸಿ ಚಾಲಕ ಮಧು ಪ್ರತಿಕ್ರಿಯಿಸಿ, "ಈ ಕ್ಯಾಂಟೀನ್ ಪಿ 7ರಲ್ಲಿ ಇದ್ದು, 5 ರಿಂದ 10 ಸಾವಿರ ಚಾಲಕರು ಬರುತ್ತಾರೆ. ಇಲ್ಲಿ ಬೇರೆ ಕ್ಯಾಂಟೀನ್ ಇಲ್ಲ. ಇಲ್ಲಿ ಬಂದರೆ ಕೆಟ್ಟು ಹೋಗಿರುವ ಇಡ್ಲಿ, ಮೂರು ನಾಲ್ಕು ದಿನಗಳ ಹಿಂದಿನ ತಿಂಡಿಗಳನ್ನು ಕೊಡುತ್ತಾರೆ. ಆದರೂ ನಾವು ಇದರ ಬಗ್ಗೆ ಪ್ರಶ್ನಿಸಲು ಹೋಗಿರಲಿಲ್ಲ. ಇಷ್ಟು ಸುಮ್ಮನಿದ್ದರೂ ಹಳಸಿ ಹೋಗಿರುವ ತಿಂಡಿಗಳನ್ನೇ ಕೊಡುತ್ತಾರೆ. ಹೊರಗಡೆ ಹೋಗಿ ತಿನ್ನಬೇಕಾದರೆ 10 ರಿಂದ 15 ಕಿಲೋಮೀಟರ್ ಹೋಗಬೇಕು. ಒಳಗಡೆ ಬಂದು ತಿನ್ನುವ ಎಂದರೆ ಈ ತರಹ ಅಸಹ್ಯ ಆಹಾರಗಳಿವೆ. ಈ ಕುರಿತು ಸಾಕಷ್ಟು ಬಾರಿ ದೂರು ನೀಡಿದ್ದೇವೆ. ಆದರೆ ಕಂಪ್ಲೇಂಟ್ ಮಾಡಲು ಹೋದಾಗ ಸಮಸ್ಯೆ ಬಗೆಹರಿಸುವುದನ್ನು ಬಿಟ್ಟು, ನಿಮ್ಮ ಹಣವನ್ನು ಮರುಪಾವತಿ ಮಾಡಿಕೊಳ್ಳಿ ಎಂಬುದನ್ನು ಬಿಟ್ಟರೆ ಬೇರೆ ಏನನ್ನೂ ಹೇಳುವುದಿಲ್ಲ" ಎಂದು ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ:ಹಾಸ್ಟೆಲ್ ಆಹಾರ ಪೂರೈಕೆಯಲ್ಲಿ ವ್ಯತ್ಯಯ ಆರೋಪ: ವಿದ್ಯಾರ್ಥಿಗಳಿಂದ ವಿಜಯಪುರ ಡಿಸಿ ಮನೆಗೆ ಮುತ್ತಿಗೆ