ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ರನ್ ವೇ ಕಾಮಗಾರಿಯ ಧೂಳಿನಿಂದ ತೊಂದರೆ ಅನುಭವಿಸಿದ ಗ್ರಾಮಸ್ಥರಿಗೆ ಕೊಂಚ ರಿಲೀಫ್ ಸಿಕ್ಕಿದೆ. ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ನೀಡಲು ಏರ್ಪೋರ್ಟ್ ಅಧಿಕಾರಿಗಳು ಮುಂದಾಗಿದ್ದು, ರೈತರ ಸಮ್ಮುಖದಲ್ಲಿ ಶಾಶ್ವತ ಪರಿಹಾರ ಒದಗಿಸಲು ಮೂರು ದಿನಗಳ ಕಾಲಾವಕಾಶ ಕೇಳಿದ್ದಾರೆ.
ವಿಮಾನ ನಿಲ್ದಾಣದ ಕಾಮಗಾರಿಯಿಂದ ಸುತ್ತಮುತ್ತಲಿನ ಗ್ರಾಮದ ಜನರು ಧೂಳಿನಿಂದಲೇ ಜೀವನ ನಡೆಸುವಂತಾಗಿದ್ದು, ಹಲವು ಪ್ರತಿಭಟನೆ ನಡಸಿದ್ರೂ ಶಾಶ್ವತ ಪರಿಹಾರ ಮಾತ್ರ ಸಿಕ್ಕಿರಲಿಲ್ಲ. ಇದೀಗ ಮತ್ತೊಂದು ರನ್ ವೇ ಮಾಡಲು ಏರ್ಪೋರ್ಟ್ ಮುಂದಾಗಿದ್ದು, ಕಾಮಗಾರಿ ಆರಂಭವಾಗಿದೆ. ಈಗಲೂ ಸುತ್ತಮುತ್ತಲಿನ ಗ್ರಾಮದ ಜನರು ಧೂಳಿನಲ್ಲೇ ಜೀವನ ನಡಸುತ್ತಿದ್ದಾರೆ. ಇದರಿಂದ ಆಕ್ರೋಶಗೊಂಡ ಬೆಟ್ಟ ಕೋಟೆ ಗ್ರಾಮದ ನೂರಾರು ರೈತರು ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ರೈತರ ಪ್ರತಿಭಟನೆಗೆ ಮಣಿದ ಏರ್ಪೋರ್ಟ್ ಅಧಿಕಾರಿಗಳು ಇವರ ಪ್ರತಿಭಟನೆಗೆ ಹೆದರಿದ ತಾಲೂಕಿನ ತಹಸೀಲ್ದಾರ್ ಕೇಶವ ಮೂರ್ತಿ ಸ್ಥಳಕ್ಕೆ ಬಂದು ರೈತರ ಸಮಸ್ಯೆ ಆಲಿಸಿ ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಆದರೆ ರೈತರು ಮಾತ್ರ ಬಿಲ್ಕುಲ್ ಒಪ್ಪಲಿಲ್ಲ. ಏರ್ಪೋರ್ಟ್ ಅಧಿಕಾರಿಗಳು ಇಲ್ಲಿಗೆ ಬಂದು ನಮ್ಮ ಸಮಸ್ಯೆಯನ್ನು ತಿಳಿದು ಪರಿಹಾರದ ಜೊತೆಗೆ ನಮಗೆ ತೊಂದರೆಯಾಗದಂತೆ ಕೆಲಸ ಮಾಡುತ್ತೇವೆ ಎಂದು ಹೇಳಬೇಕು ಎಂದು ಒತ್ತಾಯ ಮಾಡಿದ್ದಾರೆ. ಜನರ ಆಕ್ರೋಶ ನೋಡಿದ ತಹಸೀಲ್ದಾರರು, ಕೆಐಎಎಲ್ನ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿದ್ದಾರೆ.
ಈ ಸಂಬಂಧ ಏರ್ಪೋರ್ಟ್ ಅಧಿಕಾರಿಗಳಾದ ಮೋಹನ್ ಸ್ಥಳಕ್ಕೆ ಬಂದು ರೈತರ ಸಮಸ್ಯೆಗಳನ್ನು ತಿಳಿದು, ಸ್ವತಃ ಸಮಸ್ಯೆಗಳನ್ನು ಖುದ್ದಾಗಿ ನೋಡಿ ಶಾಶ್ವತ ಪರಿಹಾರ ಮತ್ತು ನಷ್ಟವನ್ನು ತುಂಬಿಕೊಡುವ ಭರವಸೆ ನೀಡಿದರು. ಅಲ್ಲದೇ ಸಮಸ್ಯೆಯ ಕುರಿತು ಏರ್ಪೋರ್ಟ್ನ ಮೇಲಾಧಿಕಾರಿಗಳಿಗೆ ಮಾಹಿತಿ ತಿಳಿಸಿ ಇದೇ ಮಂಗಳವಾರ ಸ್ಥಳಕ್ಕೆ ಆಗಮಿಸಿ ರೈತರ ಸಮ್ಮುಖದಲ್ಲಿ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುತ್ತೇವೆ ಎಂದರು.