ಯಲಹಂಕ:ಶ್ರೀ ಕ್ಷೇತ್ರ ಆದಿ ಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದ ಸ್ವಾಮೀಜಿಯವರಿಗೆ ನಾಳೆ ಯಲಹಂಕದಲ್ಲಿ ಬೃಹತ್ ಗುರುವಂದನಾ ಕಾರ್ಯಕ್ರಮ ಆಯೋಜನೆ ಮಾಡಿದ್ದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಪಾದಪೂಜೆ ಕಾರ್ಯಕ್ರಮಗಳು ನಡೆಯಲಿವೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ವಿಶ್ವನಾಥ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಲಹಂಕ ಭಾಗದಲ್ಲಿ ಬಡವರ ಅನುಕೂಲಕ್ಕಾಗಿ ಉತ್ತಮ ಆಸ್ಪತ್ರೆ ನಿರ್ಮಿಸುವ ನಿಟ್ಟಿನಲ್ಲಿ ಶ್ರೀಮಠಕ್ಕೆ ಹತ್ತು ಎಕರೆ ಜಮೀನು ನೀಡುತ್ತಿದ್ದು, ಉತ್ತಮ ಗುಣಮಟ್ಟದ ಆಸ್ಪತ್ರೆ ಮತ್ತು ಕಾಲೇಜು ಸ್ಥಾಪನೆಗೂ ನಾಳೆ ಚಾಲನೆ ನೀಡುವುದಾಗಿ ಮಾಹಿತಿ ನೀಡಿದರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ವಿಶ್ವನಾಥ್ ಯಲಹಂಕ ಮತ್ತು ಆದಿಚುಂಚನಗಿರಿ ಮಠಕ್ಕೂ ಬಹಳ ಹತ್ತಿರದ ಸಂಬಂಧವಿದೆ. ಶ್ರೀ ನಿರ್ಮಲನಾಂದ ಸ್ವಾಮಿಗಳು ಚಿಕ್ಕಬಳ್ಳಾಪುರ ಶಾಖಾ ಮಠಾಧೀಶರಾಗಿದ್ದಾಗಲೇ ಯಲಹಂಕದ ಬಗ್ಗೆ ವಿಶೇಷ ಒಲವು ಹೊಂದಿದ್ದರು. ಶ್ರೀಮಠ, ಸರ್ಕಾರ ಮಾಡುವ ಕೆಲಸವನ್ನು ಮಾಡುತ್ತಿದೆ. ನಮ್ಮದು ಧಾರ್ಮಿಕ ತಳಹದಿಯಲ್ಲಿ ಬಂದಿರುವ ದೇಶ ಎಂದರು.
ಇವತ್ತಿನ ಆಧುನಿಕ ಯುಗದಲ್ಲಿ ಧಾರ್ಮಿಕ ಆಚಾರ ವಿಚಾರಗಳನ್ನ ಮರೆತು ಹೋಗುತ್ತಿದ್ದೇವೆ. ಅವರು ಕ್ಷೇತ್ರದ ಜನರಿಗೆ ಹಿತವಚನ ಹೇಳಿಸುವ ಮೂಲಕ ಧಾರ್ಮಿಕ ಪರಂಪರೆ ಉಳಿಸುವ ಕೆಲಸ ಮಾಡಬೇಕಿದೆ. ಅಲ್ಲದೆ ಶ್ರೀ ನಿರ್ಮಲಾನಂದ ಸ್ವಾಮಿಗಳಿಗೆ ಗುರುವಂದನಾ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಸುಮಾರು 15 ಸಾವಿರಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ ಎಂದರು.