ದೇವನಹಳ್ಳಿ : ನಾಯಿ ಬೊಗಳಿತ್ತು ಎಂಬ ಕಾರಣಕ್ಕೆ ನಾಯಿ ಮಾಲೀಕನಿಗೆ ಚಾಕುವಿನಿಂದ ಹಲ್ಲೆ ಮಾಡಿದ್ದಲ್ಲದೇ, ಆತನ ಮನೆಯವರ ಮೇಲೆ ದೌರ್ಜನ್ಯ ನಡೆಸಿ, ಹೆಣ್ಣು ಮಕ್ಕಳೊಂದಿಗೆ ಅಸಭ್ಯವಾಗಿ ವರ್ತಿಸಿದ ಘಟನೆ ದೇವನಹಳ್ಳಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ದೇವನಹಳ್ಳಿ ತಾಲೂಕಿನ ದೊಡ್ಡಚೀಮನಹಳ್ಳಿಯಲ್ಲಿ ಡಿಸೆಂಬರ್ 10 ರಂದು ಘಟನೆ ನಡೆದಿದ್ದು, ಗ್ರಾಮದ ಮಧುಕುಮಾರ್ ಚಾಕು ಇರಿತಕ್ಕೆ ಒಳಗಾದವರು ಎಂಬುದಾಗಿ ತಿಳಿದು ಬಂದಿದೆ. ತೀರ್ವವಾಗಿ ಹಲ್ಲೆಗೆ ತುತ್ತಾಗಿದ್ದ ಆತನನ್ನ ದೊಡ್ಡಬಳ್ಳಾಪುರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಸದ್ಯ ಆತನ ಪರಿಸ್ಥಿತಿ ಚಿಂತಾಜನಕವಾಗಿದೆ.
ಹಲ್ಲೆಗೆ ತುತ್ತಾಗಿರುವ ಮಧುಕುಮಾರ್ ನಾಯಿಯನ್ನ ಸಾಕಿಕೊಂಡಿದ್ದರು. ಈ ನಾಯಿ ಇದೇ ಗ್ರಾಮದ ನರಸಿಂಹಮಪ್ಪನ ಮಕ್ಕಳಾದ ಸುನೀಲ್ ಮತ್ತು ಅನಿಲ್ ನನ್ನ ನೋಡಿ ಬೊಗಳಿದೆ. ಇಷ್ಟೇ ಕಾರಣಕ್ಕೆ ಸುನೀಲ್, ಅನಿಲ್, ದೇವರಾಜ್, ಅಜಯ್ ಮತ್ತು ಸ್ನೇಹಿತರು ರಾಡು, ಚಾಕು ಹಿಡಿದು ಮಧುಕುಮಾರ್ ಮನೆಯತ್ತ ಬಂದಿದ್ದಾರೆ. ನಂತರ ಮಧುಕುಮಾರ್ ಮತ್ತು ಆತನ ಅಣ್ಣ ಮಂಜುನಾಥ್ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದ ಪಾರು ಮಾಡಲು ಬಂದ ಮಂಜುನಾಥ್ ಹೆಂಡತಿಯ ಮೇಲೂ ಹಲ್ಲೆ ಮಾಡಿದಲ್ಲದೇ ಆಕೆಯೊಂದಿಗೆ ಅಸಭ್ಯವಾಗಿ ವರ್ತನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಜೀವ ಬೆದರಿಕೆ ಹಾಕಿದ ಅವರು ಅಲ್ಲಿಂದ ತೆರಳಿದ್ದಾರೆ. ಹಲ್ಲೆಯಿಂದ ಕುಸಿದು ಬಿದ್ದಿದ್ದ ಮಧುಕುಮಾರ್ನ ತಲೆಯಲ್ಲಿ ಚಾಕುವಿನ ತುಣುಕೊಂದು ಪತ್ತೆಯಾಗಿದೆ. ಘಟನೆಗೆ ಸಂಬಂಧಿಸಿದಂತೆ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ನಂತರ ಆರೋಪಿಗಳು ಪರಾರಿಯಾಗಿದ್ದಾರೆ.
ಯುವಕನಿಗೆ ಚಾಕು ಇರಿತ, ನಾಲ್ವರು ಆರೋಪಿಗಳ ಬಂಧನ (ಪ್ರತ್ಯೇಕ ಘಟನೆ) :ಯುವಕರ ಗುಂಪೊಂದು ಯುವಕನಿಗೆ ಚಾಕು ಇರಿದ ಘಟನೆ (ಡಿಸೆಂಬರ್ -8-2023) ನಡೆದಿತ್ತು. ಅಭಿಲಾಷ್ ಕಾಳೆ ಚಾಕು ಇರಿತಕ್ಕೊಳಗಾದ ಯುವಕ ಎಂಬುದಾಗಿ ತಿಳಿದುಬಂದಿತ್ತು. ಘಟನೆ ಸಂಬಂಧ ದೀಪಕ್ ಲಕ್ಷ್ಮಣ ರಾಠೋಡ, ಕಾರ್ತಿಕ್ ಮಂಜುನಾಥ ಪೇಟೇಕರ, ಮನೋಜ್ ಮುತ್ತಣ್ಣ ದೊಡ್ಡಮನಿ, ಕಿಶೋರ್ ರಮೇಶ ರಾಠೋಡ ಎಂಬ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
"ಮುದ್ದೇಬಿಹಾಳ ಪಟ್ಟಣದ ನಾಲ್ವರು ಯುವಕರು ಆಲಮಟ್ಟಿ ಉದ್ಯಾನ ವೀಕ್ಷಣೆಗೆ ಎಂದು ರಾಕ್ ಗಾರ್ಡನ್ಗೆ ತೆರಳುತ್ತಿದ್ದ ಯುವತಿಯರ ಗುಂಪಿಗೆ ಚುಡಾಯಿಸಿದ್ದರು. ಈ ವೇಳೆ, ಅಭಿಲಾಷ್ ಕಾಳೆ ಸೇರಿದಂತೆ ಕೆಲವರು ಯುವಕರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದರಿಂದ ಎರಡು ಗುಂಪಿನ ನಡುವೆ ವಾಗ್ವಾದ ನಡೆದಿತ್ತು. ನಂತರ ಅಂದು ಸಂಜೆ ಆರೋಪಿಗಳು ಆಲಮಟ್ಟಿ ಪೆಟ್ರೋಲ್ ಪಂಪ್ ಬಳಿ ಇರುವ ಪ್ರವೇಶ ದ್ವಾರದ ಬಳಿ ಕುಳಿತಿದ್ದ ಅಭಿಷೇಕ್ ಕಾಳೆಗೆ ಚಾಕು ಇರಿದಿದ್ದರು" ಎಂದು ವಿಜಯಪುರ ಡಿವೈಎಸ್ಪಿ ಜಿ ಹೆಚ್ ತಳಕಟ್ಟಿ ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಆಲಮಟ್ಟಿ ಪೊಲೀಸ್ ಠಾಣೆಯಲ್ಲಿ ಕೊಲೆ ಆರೋಪ ಹಾಗೂ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ವಿಜಯಪುರ: ಯುವಕನಿಗೆ ಚಾಕು ಇರಿತ, ನಾಲ್ವರು ಆರೋಪಿಗಳ ಬಂಧನ