ನೆಲಮಂಗಲ: ಸೂಕ್ತ ದಾಖಲಾತಿ ಇಲ್ಲದೆ ನಗರದಲ್ಲಿ ಓಡಾಡುತ್ತಿದ್ದ ದುಬಾರಿ ಬೆಲೆಯ ಕಾರುಗಳನ್ನು ಆರ್‌ಟಿಒ ಅಧಿಕಾರಿಗಳು ದಾಳಿ ನಡೆಸಿ ಜಪ್ತಿ ಮಾಡಿದ್ದರು. ಈ ವೇಳೆ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಹೆಸರಿನಲ್ಲಿ ನೋಂದಣಿಯಾಗಿರುವ ರೋಲ್ಸ್ ರಾಯ್ ಕಾರ್ ಸಹ ಸೀಜ್ ಮಾಡಲಾಗಿತ್ತು.
ಆ.22 ರಂದು ಯಲಹಂಕ ಆರ್‌ಟಿಒ ಅಧಿಕಾರಿಗಳು ತೆರಿಗೆ ವಂಚಿತ ವಾಹನಗಳನ್ನ ಸೀಜ್ ಮಾಡಿದ್ದರು. 2 ವರ್ಷಗಳಿಂದಲೂ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಒಡೆತನದ ರೋಲ್ಸ್ ರಾಯ್ಸ್ ಕಾರು ಬೆಂಗಳೂರಿನಲ್ಲಿ ಓಡಾಡುತ್ತಿತ್ತು. ಆದರೂ ಒಮ್ಮೆಯೂ ಅಧಿಕಾರಿಗಳು ಪರಿಶೀಲನೆ ನಡೆಸಿರಲಿಲ್ಲ.
ಉಮ್ರಾ ಡೆವಲಪರ್ಸ್ ಮಾಲೀಕ ಬಾಬು ಎಂಬಾತ ಅಮಿತಾಬ್ ಬಚ್ಚನ್ ರಿಂದ ಈ ಕಾರನ್ನು ಖರೀದಿಸಿದ್ದರು. ಪ್ರಮುಖ ವಿಷಯ ಎಂದರೆ ಈ ರೋಲ್ಸ್ ರಾಯ್ಸ್ ಕಾರು ಇನ್ನೂ ಸಹ ಅಮಿತಾಬ್ ಬಚ್ಚನ್ ಅವರ ಹೆಸರಿನಲ್ಲೇ ಇತ್ತು ಎಂದು ಪರಿಶೀಲನೆ ವೇಳೆ ತಿಳಿದು ಬಂದಿದೆ.
ಅಮಿತಾಬ್ ಬಚ್ಚನ್ ಕಾರು ಖರೀದಿಸಿದ್ದ ಕೋಲಾರದ ಬಾಬು ನೆಲಮಂಗಲದ ಆರ್‌ಟಿಒ ಕಚೇರಿಗೆ ಧಾವಿಸಿ ವಾಹನ ತೆರಿಗೆ ಕಟ್ಟಿದ ದಾಖಲಾತಿ ಪತ್ರಗಳು, ಇನ್ಸೂರೆನ್ಸ್ ದಂಡ ಪಾವತಿಸಿ ರೋಲ್ಸ್ ರಾಯ್ ಕಾರನ್ನ ರಿಲೀಸ್ ಮಾಡಿಸಿಕೊಂಡರು.
ಬಳಿಕ ದಂಡ ಪಾವತಿಸಿಕೊಂಡ ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿ ಜಿ.ಎಸ್.ಗುರುಮೂರ್ತಿ ಉದ್ಯಮಿಗೆ ಕಾರನ್ನು ಹಸ್ತಾಂತರಿಸಿದರು. ರೋಲ್ಸ್ ರಾಯ್ ಕಾರು ಅಮಿತಾಬ್ ಬಚ್ಚನ್ ಹೆಸರಿನಲ್ಲಿ ನೊಂದಣಿಯಾಗಿದ್ದು, ಪ್ರಸ್ತುತ ಎಲ್ಲಾ ದಾಖಲೆಗಳು ಅವರ ಹೆಸರಿನಲ್ಲಿವೆ.