ಬೆಂಗಳೂರು: ಐಎಂಎ ವಂಚನೆ ಪ್ರಕರಣ ಸಂಬಂಧ ವಿಶೇಷ ನ್ಯಾಯಾಲಯ ರಚಿಸುವ ಸಂಬಂಧ ಕ್ರಮ ಕೈಗೊಳ್ಳುತ್ತೇವೆ ಎಂದು ಕಾನೂನು ಸಚಿವ ಮಾಧುಸ್ವಾಮಿ ತಿಳಿಸಿದರು.
ವಿಧಾನಸಭೆಯಲ್ಲಿ ನಿಯಮ 69ರಡಿ ಐಎಂಎ ವಿಚಾರ ಪ್ರಸ್ತಾಪಿಸಿದ ಶಾಸಕ ರಿಜ್ವಾನ್ ಅರ್ಷದ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈಗಾಗಲೇ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದೆ. ಸಿಬಿಐ ಪ್ರಕರಣದ ತನಿಖೆ ನಡೆಸುತ್ತಿದ್ದು, ಕಾಲ ಕಾಲಕ್ಕೆ ಹೈಕೋರ್ಟ್ಗೆ ವರದಿ ನೀಡುತ್ತಿದ್ದೇವೆ. ಪ್ರಕರಣ ಸಂಬಂಧ ಸುಮಾರು 70 ಸಾವಿರ ದೂರುಗಳು ದಾಖಲಾಗಿವೆ. ಈಗಾಗಲೇ ವಿಶೇಷ ನ್ಯಾಯಾಲಯ ಸ್ಥಾಪನೆ ಸಂಬಂಧ ಹೈಕೋರ್ಟ್ಗೆ ಮನವಿ ಮಾಡಿದ್ದೇವೆ. ಹೈಕೋರ್ಟ್ನಲ್ಲೂ ಈ ಬಗ್ಗೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
ಐಎಂಎ ಪ್ರಕರಣಕ್ಕೆ ವಿಶೇಷ ನ್ಯಾಯಾಲಯ ರಚಿಸುವ ಬಗ್ಗೆ ಕ್ರಮ: ಸಚಿವ ಮಾಧುಸ್ವಾಮಿ ಈಗಾಗಲೇ ಕಂದಾಯ ಇಲಾಖೆ 465.21 ಕೋಟಿ ರೂ. ಸ್ಥಿರ ಮತ್ತು ಚರಾಸ್ತಿಯನ್ನು ಮುಟ್ಟುಗೋಲು ಹಾಕಲು ಅಧಿಸೂಚನೆ ಹೊರಡಿಸಿದೆ. ಐಎಂಎಯಿಂದ ಜಪ್ತಿಯಾಗಿರುವ ಆಸ್ತಿ, ಹಣವನ್ನು ವಂಚನೆಗೊಳಗಾದ ಠೇವಣಿದಾರರಿಗೆ ಹಂಚುವ ಬಗ್ಗೆ ಕೋರ್ಟ್ ನಿರ್ಧಾರ ತಗೋಬೇಕು. ಹೂಡಿಕೆದಾರರಿಗೆ ಹಣ ಹಂಚುವ ಅಧಿಕಾರ ಸರ್ಕಾರಕ್ಕಿಲ್ಲ. ಕೋರ್ಟ್ ಈ ನಿಟ್ಟಿನಲ್ಲಿ ನಿರ್ಧರಿಸಲಿದೆ. ಆದರೂ ಈ ಕುರಿತು ಹೈಕೋರ್ಟ್ಗೆ ಸರ್ಕಾರದಿಂದ ಮನವಿ ಮಾಡುತ್ತೇವೆ ಎಂದು ವಿವರಿಸಿದರು.
ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ರಿಜ್ವಾನ್ ಅರ್ಷದ್, ಐಎಂಎ ಪ್ರಕರಣ ಗಂಭೀರವಾಗಿದೆ. ಹೂಡಿಕೆದಾರರಿಗೆ ಹಣ ವಾಪಸ್ ಕೊಡಿಸುವ ಕೆಲಸ ಬೇಗ ಆಗಬೇಕು. ಐಎಂಎ ಕುರಿತ ಎಲ್ಲಾ ಪ್ರಕರಣಗಳ ಇತ್ಯರ್ಥಕ್ಕೆ ಫಾಸ್ಟ್ ಟ್ರ್ಯಾಕ್ ಕೋರ್ಟ್ ತೆರೆಯಬೇಕು. ಈ ಕೋರ್ಟ್ಗೆ ನ್ಯಾಯಾಧೀಶರ ನೇಮಕ ಮಾಡಬೇಕು ಎಂದು ಆಗ್ರಹಿಸಿದರು.
ಐಎಂಎ ಪ್ರಕರಣದ ಹಿಂದೆ ರಾಜಕಾರಣಿಯೊಬ್ಬರ ಕೈವಾಡ ಇದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಸಚಿವರಾಗಿದ್ದ ಆ ರಾಜಕಾರಣಿಯ ಹಸ್ತಕ್ಷೇಪ ಇದೆ ಅಂತಲೂ ವರದಿಯಾಗಿದೆ. ಅವರು ಈಗ ತಮಗೆ ತಾವು ಸೇಫ್ ಅನ್ಕೊಂಡು ಓಡಾಡ್ತಿದ್ದಾರೆ. ಬೇರೆ ಪಕ್ಷಕ್ಕೆ ಹೋಗಿದೀನಿ, ಹಾಗಾಗಿ ಸೇಫ್ ಅಂತ ಆ ರಾಜಕಾರಣಿ ಅನ್ಕೊಂಡಿದ್ದಾರೆ ಎಂದು ಇದೇ ವೇಳೆ ಮಾಜಿ ಸಚಿವ ರೋಷನ್ ಬೇಗ್ ಹೆಸರು ಹೇಳದೇ ಟಾಂಗ್ ನೀಡಿದರು.