ದೊಡ್ಡಬಳ್ಳಾಪುರ: ಹೋಟೆಲ್ ವ್ಯಾಪಾರ ವೃದ್ಧಿಸುವುದಾಗಿ ಹೇಳಿದ ವಂಚಕನೊಬ್ಬ ವೃದ್ಧೆಯ ಬಳಿಯಿದ್ದ 70 ಗ್ರಾಂ ಚಿನ್ನದ ಸರ ದೋಚಿ ಪರಾರಿಯಾಗಿದ್ದಾನೆ. 82 ವರ್ಷದ ಜಯಮ್ಮ ವಂಚನೆಗೊಳಗಾಗಿದ್ದಾರೆ.
ಜಯಮ್ಮ ಅಳಿಯ ಮತ್ತು ಮಗಳ ಜೊತೆ ನಗರದ ತಿಗಳರಪೇಟೆಯಲ್ಲಿ ವಾಸವಾಗಿದ್ದಾರೆ. ಅಳಿಯ ಆಸ್ಪತ್ರೆಯ ಮುಂಭಾಗದಲ್ಲಿ ತಳ್ಳುಗಾಡಿಯಲ್ಲಿ ಮಿಲ್ಟ್ರಿ ಹೊಟೇಲ್ ವ್ಯಾಪಾರ ನಡೆಸುತ್ತಿದ್ದು, ಡಿಸೆಂಬರ್ 6 ರಂದು ಆಸ್ಪತ್ರೆಗೆ ಹೋಗಬೇಕಿದ್ದರಿಂದ ವ್ಯಾಪಾರ ನೋಡಿಕೊಳ್ಳುವಂತೆ ಜಯಮ್ಮರಿಗೆ ಒಪ್ಪಿಸಿ ಹೋಗಿದ್ದಾರೆ. ಅದರಂತೆ, ಆ ದಿನ ವ್ಯಾಪಾರ ನೋಡಿಕೊಳ್ಳುತ್ತಿದ್ದಾಗ ಬೆಳಗ್ಗೆ 11 ಗಂಟೆ ಸುಮಾರಿಗೆ ಅಪರಿಚಿತ ವ್ಯಕ್ತಿಯೊಬ್ಬ ತಳ್ಳು ಗಾಡಿಯ ಬಳಿ ಬಂದಿದ್ದಾನೆ.
ಅಜ್ಜಿಯನ್ನು ಮಾತನಾಡಿಸಿ, ವ್ಯಾಪಾರ ಹೇಗಿದೆ ಎಂದು ಕೇಳಿದ್ದಾನೆ. ಅದಕ್ಕೆ ಜಯಮ್ಮ ವ್ಯಾಪಾರ ಅಷ್ಟಕಷ್ಟೇ ಎಂದು ಬೇಸರದಿಂದ ತಿಳಿಸಿದ್ದಾರೆ. ಇದಾದ ಬಳಿಕ ವಂಚಕ ನಿಮ್ಮ ವ್ಯಾಪಾರ ವೃದ್ಧಿ ಮಾಡುವುದಾಗಿ ಹೇಳಿದ್ದಾನೆ. ಅದರಂತೆ ವೃದ್ಧೆಯ ಬಳಿ ಒಂದು ಪೇಪರ್ ಹಾಳೆಯನ್ನು ತೆಗೆದುಕೊಂಡು ಅದರಲ್ಲಿ ಕುಂಕುಮ ಹಾಕಿ ಇದ್ದಂತಹ ಚಿನ್ನದ ಸರವನ್ನು ಹಾಕುವಂತೆ ಸೂಚಿಸಿದ್ದಾನೆ. ಅದೇ ಹಾಳೆಯನ್ನು ವೃದ್ಧೆಯ ಸೆರಗಿಗೆ ಕಟ್ಟಿ ಆತನೇ ಅವರ ಸೊಂಟಕ್ಕೆ ಸೆರಗು ಸಿಕ್ಕಿಸಿದ್ದಾನೆ. ಸ್ವಲ್ಪ ಸಮಯದ ನಂತರ ಅದನ್ನು ಸೆರಗಿನಿಂದ ಬಿಡಿಸಿ ಎಂದು ಹೇಳಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ.