ಹೊಸಕೋಟೆ : ಟ್ರಕ್ ಟರ್ಮಿನಲ್ನಲ್ಲಿ ನಿಂತಿದ್ದ ಲಾರಿಗಳಿಂದ ಡೀಸೆಲ್ ಕದಿಯಲು ನಾಲ್ಕು ಜನರ ಕಳ್ಳರ ಗ್ಯಾಂಗ್ ಬಂದಿದ್ದು, ಕದಿಯುವ ಯತ್ನದಲ್ಲಿ ಕಳ್ಳನೊಬ್ಬ ಚಾಲಕರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ವೇಳೆ, ಲಾರಿ ಚಾಲಕರಿಂದ ಹಲ್ಲೆಗೊಳಗಾಗಿ ಅಸ್ವಸ್ಥನಾಗಿದ್ದ ಕಳ್ಳ ಸಾವನ್ನಪ್ಪಿದ್ದಾನೆ.
ಹೊಸಕೋಟೆ ಹೊರವಲಯದ ಮಾಲೂರು ರಸ್ತೆಯ ಟ್ರಕ್ ಟರ್ಮಿನಲ್ನಲ್ಲಿ ಇಂದು ಮುಂಜಾನೆ ಘಟನೆ ನಡೆದಿದ್ದು, ಘಟನೆಯಲ್ಲಿ ಲಾರಿ ಚಾಲಕರ ಹಲ್ಲೆಯಿಂದ ಗಾಯಗೊಂಡಿದ್ದ ಡೀಸೆಲ್ ಕಳ್ಳ ಅಫ್ಜಲ್ ಸಾವನ್ನಪ್ಪಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಹೊರ ವಲಯದ ಮಾಲೂರು ರಸ್ತೆಯಲ್ಲಿ ನಿತ್ಯ ದೇವನಗುಂದಿಯ ಇಂಧನ ಹಾಗೂ ನೆರೆಯ ತಮಿಳುನಾಡಿನಿಂದ ಸರಕು ಸಾಮಗ್ರಿಗಳನ್ನ ಸಾಗಾಟ ಮಾಡಲು ನೂರಾರು ಲಾರಿಗಳು ಬರುತ್ತವೆ.
ಹೀಗೆ ದೂರದ ಊರುಗಳಿಂದ ಬಂದ ಲಾರಿ ಚಾಲಕರು ಇದೇ ಶೆಡ್ ಬಳಿ ಲಾರಿಗಳನ್ನ ನಿಲ್ಲಿಸಿ ಕೆಲ ಕಾಲ ವಿಶ್ರಾಂತಿ ಪಡೆದು ಹೋಗ್ತಿದ್ದರು. ಇದನೆಲ್ಲ ಗಮನಿಸಿದ ನಾಲ್ವರು ಕಳ್ಳರು ಕಳೆದ ರಾತ್ರಿ ನಿಂತಿದ್ದ ಲಾರಿಗಳನ್ನು ಗಮನಿಸಿದ್ದಾರೆ. ಅದರಂತೆ ಇಂದು ಮುಂಜಾನೆ ಡೀಸೆಲ್ ಕದಿಯಲು ಬಂದಿದ್ದು, ಲಾರಿಯ ಟ್ಯಾಂಕ್ನಿಂದ ಡೀಸೆಲ್ ಕಳ್ಳತನ ಮಾಡುವ ವೇಳೆ ಚಾಲಕರು ಇವರನ್ನು ಹಿಡಿದಿದ್ದಾರೆ.
ಕೈಗೆ ಸಿಕ್ಕ ಕಳ್ಳನ ಮೇಲೆ ಚಾಲಕರಿಂದ ಹಲ್ಲೆ: ಡೀಸೆಲ್ ಕದಿಯುವ ವೇಳೆ ಲಾರಿ ಚಾಲಕನೊಬ್ಬನಿಗೆ ಎಚ್ಚರವಾಗಿ ಹಾರ್ನ್ ಮಾಡಿ ಎಲ್ಲ ಚಾಲಕರನ್ನ ಎಬ್ಬಿಸಿದ್ದಾನೆ. ಹಾರ್ನ್ ಶಬ್ದ ಕೇಳಿದ ಕಳ್ಳರ ಗ್ಯಾಂಗ್ ಅಲ್ಲಿಂದ ಪರಾರಿಯಾಗಲು ಯತ್ನಿಸಿದೆ. ಈ ವೇಳೆ, ಅಫ್ಜಲ್ ಎಂಬ ವ್ಯಕ್ತಿ ಚಾಲಕರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಕೈಗೆ ಸಿಕ್ಕಕಳ್ಳನ ಮೇಲೆ ಚಾಲಕರು ಹಲ್ಲೆ ನಡೆಸಿದ್ದಾರೆ.