ದೊಡ್ಡಬಳ್ಳಾಪುರ:ಪಾವಗಡ ಬಸ್ ದುರಂತದಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ಮತ್ತು ಗಾಯಾಳುಗಳ ಯೋಗಕ್ಷೇಮ ವಿಚಾರಿಸಲು ಮಾಜಿ ಸಿಎಂ ಕುಮಾರಸ್ವಾಮಿ ಹೋಗುತ್ತಿದ್ದಾಗ, ಅವರ ಬೆಂಗಾವಲು ವಾಹನ ವಿದ್ಯುತ್ ಕಂಬಕ್ಕೆ ಗುದ್ದಿ ಜಖಂಗೊಂಡಿದೆ.
ಭಾನುವಾರ ಬೆಳಗ್ಗೆ 10:30ಕ್ಕೆ ದೊಡ್ಡಬಳ್ಳಾಪುರ ನಗರದ ಹಾಲಿನ ಡೈರಿ ಮುಂಭಾಗದಲ್ಲಿ ಈ ಘಟನೆ ನಡೆದಿದೆ. ಅಪಘಾತದಲ್ಲಿ ಬೆಂಗಾವಲು ವಾಹನ ಸಂಪೂರ್ಣ ಜಖಂಗೊಂಡಿದ್ದು, ಬೆಂಗಾವಲು ವಾಹನದಲ್ಲಿದ್ದ ಪೊಲೀಸರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಗರದ ಡೈರಿ ಸರ್ಕಲ್ ಮುಂಭಾಗ ಬರುವಾಗ ಹೆಚ್ಡಿಕೆ ಕಾರಿನ ಹಿಂದೆ ಬೆಂಗಾವಲು ವಾಹನ ಬರುತ್ತಿತ್ತು. ಈ ವೇಳೆ ಎದುರುಗಡೆಯಿಂದ ವಾಹನವೊಂದು ಅಡ್ಡಬಂದಿದೆ. ಅದಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಸಲುವಾಗಿ ಬೆಂಗಾವಲು ವಾಹನ ಚಾಲಕ ಬಲಭಾಗಕ್ಕೆ ತಿರುಗಿಸಿದ್ದಾರೆ. ಪರಿಣಾಮ ರಸ್ತೆ ಬದಿ ಇರುವ ಎರಡು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.
ಡಿಕ್ಕಿ ರಭಸಕ್ಕೆ ಎರಡು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ವಾಹನದ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ವಾಹನದಲ್ಲಿದ್ದ ಬೆಂಗಾವಲು ಸೇವೆಯ ಐವರು ಪೊಲೀಸ್ ಸಿಬ್ಬಂದಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಉಳಿದಂತೆ ಹೆಚ್ಚಿನ ಅನಾಹುತ ಆಗಿಲ್ಲ ಎಂದು ತಿಳಿದುಬಂದಿದೆ.