ದೊಡ್ಡಬಳ್ಳಾಪುರ: ಅಕ್ರಮ ಆಸ್ತಿ ಗಳಿಕೆ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರ ಕಸಬಾ ರೆವಿನ್ಯೂ ಇನ್ಸ್ಪೆಕ್ಟರ್ ಎನ್. ಲಕ್ಷ್ಮಿನರಸಿಂಹಯ್ಯ ನಿವಾಸದ ಮೇಲೆ ಇಂದು ಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸತತ 12 ಗಂಟೆಗಳ ವಿಚಾರಣೆ ನಂತರ 2 ಕೋಟಿ 25 ಲಕ್ಷ ಮೌಲ್ಯದ ನಿವೇಶನ ಮತ್ತು ಚಿನ್ನಾಭರಣ ಪತ್ತೆಯಾಗಿದೆ.
ದೊಡ್ಡಬಳ್ಳಾಪುರದ ತೇರಿನಬೀದಿಯ ಅರಳು ಮಲ್ಲಿಗೆ ಶಾಲೆಯ ಮುಂಭಾಗದ ಎನ್.ಲಕ್ಷ್ಮಿನರಸಿಂಹಯ್ಯ ನಿವಾಸದ ಮೇಲೆ ಇಂದು ಬೆಳಗ್ಗೆ 6:30ರ ಸಮಯದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಶೋಧ ಕಾರ್ಯ ಮುಂದುವರೆಸಿದ್ದರು. ಒಟ್ಟು 12 ಗಂಟೆ ನಡೆದ ದಾಖಲೆಗಳ ಪರಿಶೀಲನೆ ಮತ್ತು ವಿಚಾರಣೆಯಲ್ಲಿ 2 ಕೋಟಿ 25 ಲಕ್ಷ 90 ಸಾವಿರದ 647 ರೂಪಾಯಿ ಪತ್ತೆಯಾಗಿದೆ.
ಎಸಿಬಿ ದಾಳಿಯ ಬಗ್ಗೆ ರೆವಿನ್ಯೂ ಇನ್ಸ್ಪೆಕ್ಟರ್ ಎನ್.ಲಕ್ಷ್ಮಿನರಸಿಂಹಯ್ಯ ಮಾತನಾಡಿದರು ಇದರಲ್ಲಿ 1 ಕೋಟಿ 65 ಲಕ್ಷದ 4 ಮನೆ, 2 ನಿವೇಶನ, 16 ಲಕ್ಷ 28 ಸಾವಿರ ಮೌಲ್ಯದ ಒಂದು ಕಾರು, ಎರಡು ದ್ವಿಚಕ್ರ ವಾಹನಗಳು, 5 ಲಕ್ಷ 88 ಸಾವಿರ ಮೌಲ್ಯದ ಗೃಹೋಪಯೋಗಿ ವಸ್ತುಗಳು, 31 ಲಕ್ಷ 84 ಸಾವಿರ ಮೌಲ್ಯದ 756 ಗ್ರಾಂ ಚಿನ್ನಾಭರಣ, 6 ಲಕ್ಷ 90 ಸಾವಿರ 647 ಮೌಲ್ಯದ 15 ಕೆ.ಜಿ ಬೆಳ್ಳಿ ಸಾಮಗ್ರಿ ಪತ್ತೆಯಾಗಿದೆ. ಅಂತಿಮವಾಗಿ ಪಂಚನಾಮೆ ಮಾಡಿಕೊಂಡು ಹೊರಟ ಅಧಿಕಾರಿಗಳು ಕೆಲವು ಕಾಗದ ಪತ್ರಗಳನ್ನು ತೆಗೆದುಕೊಂಡು ಹೋಗಿದ್ದಾರೆ.
ಎಸಿಬಿ ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿದ ರೆವಿನ್ಯೂ ಇನ್ಸ್ಪೆಕ್ಟರ್ ಲಕ್ಷ್ಮಿನರಸಿಂಹಯ್ಯ, 'ಬೆಳಗ್ಗೆ 6:30ರ ಸಮಯದಲ್ಲಿ ಎಸಿಬಿ ಅಧಿಕಾರಿಗಳು ಮನೆಯ ಬಳಿ ಬಂದು ಸರ್ಚ್ ವಾರಂಟ್ ಬಂದಿದೆ ಎಂಬುದಾಗಿ ತೋರಿಸಿದರು. ಅನಂತರ ನಾನು ಅವರನ್ನು ಮನೆಯೊಳಗೆ ಕರೆದೆ. ಅವರ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ. ಅಲ್ಲದೇ, ನನ್ನ ಬಳಿಯಿದ್ದ ಎಲ್ಲ ದಾಖಲಾತಿಗಳನ್ನು ತೋರಿಸಿದ್ದೇನೆ. ಅದರಂತೆ ಅವರು ಪರಿಶೀಲನೆ ನಡೆಸಿದ್ದಾರೆ. ಮುಂದೆ ನೋಟಿಸ್ ಕಳುಹಿಸುತ್ತೇವೆ. ಆಗ ವಿಚಾರಣೆಗೆ ಬರಬೇಕು ಎಂದಿದ್ದಾರೆ' ಎಂದು ತಿಳಿಸಿದರು.
ಇದನ್ನೂ ಓದಿ:ಕಳವು ಮಾಡಿದ ಕಲಾಕೃತಿಗಳ ಆನ್ಲೈನ್ ಹರಾಜು.. ಮೈಸೂರಲ್ಲಿ ಆರೋಪಿಗಳ ಬಂಧನ..