ದೊಡ್ಡಬಳ್ಳಾಪುರ : ಕೆಲಸಕ್ಕೆ ರಜೆ ಹಾಕಿ ಮೊಬೈಲ್ ರಿಪೇರಿ ಮಾಡಿಸಲು ನಗರಕ್ಕೆ ಹೋಗಿದ್ದ ವ್ಯಕ್ತಿಯೊಬ್ಬ ಪವರ್ ಹೈಟೆನ್ಷನ್ ಕಂಬದಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಕೊನೇನಹಳ್ಳಿ ಗ್ರಾಮದ ಹೊರಭಾಗದಲ್ಲಿ ನಡೆದಿದೆ. ಕಂಬದಲ್ಲಿ ನೇತಾಡುತ್ತಿರುವ ಸ್ಥಿತಿಯಲ್ಲಿ ಶವ ಪತ್ತೆಯಾಗಿರುವುದು ಹಲವು ಸಂಶಯಕ್ಕೆ ಕಾರಣವಾಗಿದೆ.
ಕೊನೇನಹಳ್ಳಿ ಗ್ರಾಮದ 25 ವರ್ಷದ ಅಮೃತ್ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಯುವಕ. ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುತ್ತಿದ್ದ ಈತ, ಮೊನ್ನೆ ಕೆಲಸಕ್ಕೆ ರಜೆ ಹಾಕಿದ್ದ. ಮನೆಯಲ್ಲಿ ಮೊಬೈಲ್ ರಿಪೇರಿ ಮಾಡಿಸಲು ದೊಡ್ಡಬಳ್ಳಾಪುರಕ್ಕೆ ಹೋಗಿ ಬರುವುದಾಗಿ ಹೇಳಿದ್ದ. ಹೀಗೆ ಹೋದವನು ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ರಾತ್ರಿಯೆಲ್ಲಾ ಹುಡುಕಾಡಿದ ಕುಟುಂಬಸ್ಥರು ಬೆಳಗ್ಗೆ ಬರುತ್ತಾನೆಂದು ನಂಬಿ ಸುಮ್ಮನಾಗಿದ್ದಾರೆ. ನಿನ್ನೆ ಬೆಳಗ್ಗೆ 10 ಗಂಟೆ ವೇಳೆಗೆ ದನ ಕಾಯುವ ಹುಡುಗರು ವಿದ್ಯುತ್ ಕಂಬದಲ್ಲಿ ಯುವಕನ ಶವ ನೇತಾಡುತ್ತಿರುವ ಬಗ್ಗೆ ತಿಳಿಸಿದ್ದಾರೆ. ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಅಮೃತ್ ಎಂದು ತಿಳಿದುಬಂದಿದೆ. ಅಂದಹಾಗೆ, ಅಮೃತ್ ಸಾವು ಹಲವು ಸಂಶಯಕ್ಕೆ ಕಾರಣವಾಗಿದೆ. ಘಟನೆಗೆ ಸಂಬಂಧಿಸಿದಂತೆ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟ್ರೈನಿ ಗಗನಸಖಿ ಶವ ಪತ್ತೆ : ಮುಂಬೈನ ಪೊವೈ ಪೊಲೀಸ್ ಠಾಣಾ ವ್ಯಾಪ್ತಿಯ ಮರೋಲ್‌ನಲ್ಲಿರುವ ಫ್ಲಾಟ್ನಲ್ಲಿ ಇದೇ ತಿಂಗಳ 5ನೇ ತಾರೀಖಿನಂದು 24 ವರ್ಷದ ಗಗನಸಖಿಯೊಬ್ಬರ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಪೊವೈ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಕೇವಲ ಎಂಟು ಗಂಟೆಗಳಲ್ಲಿ ಆರೋಪಿಯನ್ನು ಪೊವೈ ತುಂಗಾ ಪ್ರದೇಶದಲ್ಲಿ ಬಂಧಿಸಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ ದತ್ತಾ ನಲವ್ಡೆ ಈಟಿವಿ ಭಾರತಕ್ಕೆ ತಿಳಿಸಿದ್ದರು. ವಿಕ್ರಮ್ ಅಥ್ವಾಲ್ (40) ಬಂಧಿತ ಆರೋಪಿ.