ದೊಡ್ಡಬಳ್ಳಾಪುರ: ಕಳೆದ ಕೆಲವು ದಿನಗಳಿಂದ ಇಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಮೂರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ತಾತ್ಕಾಲಿಕ ಸೇತುವೆ ನೀರಿನಲ್ಲಿ ಕೊಚ್ಚಿ ಹೋಗಿದೆ. ಸಂಪರ್ಕ ಕಡಿತದಿಂದ ಕಂಗಾಲಾಗಿರುವ 2 ಸಾವಿರಕ್ಕೂ ಹೆಚ್ಚು ಜನರು ಶಾಶ್ವತ ಸೇತುವೆ ನಿರ್ಮಿಸುವಂತೆ ಒತ್ತಾಯಿಸಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯ, ದೊಡ್ಡಬಳ್ಳಾಪುರ ಮತ್ತು ಕೊಟ್ಟಿಗೆಮಾಚೇನಹಳ್ಳಿಗೆ ಸಂಪರ್ಕಿಸುವ ಸೇತುವೆ ಭಾರಿ ಮಳೆಗೆ ಕೊಚ್ಚಿ ಹೋಗಿದೆ. ಈ ಸೇತುವೆ ಕೊಟ್ಟಿಗೆಮಾಚೇನಹಳ್ಳಿ,ಕುಕ್ಕಲಹಳ್ಳಿ ಮತ್ತು ಬ್ಯಾಡರಹಳ್ಳಿಯ ಸುಮಾರು 2 ಸಾವಿರಕ್ಕೂ ಹೆಚ್ಚು ಜನರ ಸಂಪರ್ಕ ಸೇತುವೆಯಾಗಿತ್ತು. ಕಳೆದ ಕೆಲವು ವರ್ಷಗಳಿಂದ ಭಾರಿ ಮಳೆಗೆ ಕೊಟ್ಟಿಗೆ ಮಾಚೇನಹಳ್ಳಿ ಸೇತುವೆ ಮಳೆ ನೀರಿನೊಂದಿಗೆ ಕೊಚ್ಚಿ ಹೋಗುತ್ತಿರುವುದು ಸಾಮಾನ್ಯವಾಗಿದ್ದು, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ಆಸ್ಪತ್ರೆಗೆ ತೆರಳುವ ರೋಗಿಗಳಿಗೆ, ಅಗತ್ಯ ವಸ್ತುಗಳನ್ನ ತರಲು ನಗರಕ್ಕೆ ತೆರಳುವ ಜನರಿಗೆ ಸಾಕಷ್ಟು ಸಮಸ್ಯೆ ಉಂಟಾಗಿದೆ.
ದೊಡ್ಡಬಳ್ಳಾಪುರದಲ್ಲಿ ಸುರಿದ ಭಾರೀ ಮಳೆಗೆ ಕೊಚ್ಚಿ ಹೋದ ತಾತ್ಕಾಲಿಕ ಸೇತುವೆ, ಸಾರ್ವಜನಿಕರ ಆಕ್ರೋಶ ಸುತ್ತಮುತ್ತಲಿನ ಪ್ರದೇಶ ಬೆಟ್ಟಗುಡ್ಡಗಳಿಂದ ಕೂಡಿದ್ದು, ಮಳೆ ಬಂದಾಗ ಹಳ್ಳದಲ್ಲಿ ಭಾರಿ ಪ್ರಮಾಣದ ನೀರು ಹರಿದು ಬರುತ್ತದೆ. ಈ ಹಳ್ಳವನ್ನು ದಾಟಲು ಕಟ್ಟಿರುವ ಸೇತುವೆ ಚಿಕ್ಕದಾಗಿದ್ದು, ಬೆಟ್ಟದಿಂದ ಹರಿದು ಬರುವ ಭಾರಿ ಪ್ರಮಾಣದ ನೀರಿಗೆ ಸೇತುವೆ ಕೊಚ್ಚಿ ಹೋಗುತ್ತಿರುವುದಾಗಿ ಹೇಳಲಾಗಿದೆ.
ಪ್ರತಿ ಸಲ ಸೇತುವೆ ಕೊಚ್ಚಿ ಹೋದಾಗಲು 5 ಲಕ್ಷ ರೂ. ವೆಚ್ಚದಲ್ಲಿ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಿ ಸರ್ಕಾರ ಕೈತೊಳೆದು ಕೊಳ್ಳುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯ ಕೇಳಿ ಬಂದಿದೆ. ತಾತ್ಕಾಲಿಕ ಸೇತುವೆ ಬದಲಾಗಿ, ಶಾಶ್ವತ ಸೇತುವೆ ನಿರ್ಮಾಣಕ್ಕೆ ಸ್ಥಳೀಯರು ಒತ್ತಾಯಿಸಿದ್ದು, ಇದರಿಂದ ಗ್ರಾಮಸ್ಥರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
ಓದಿ :ಶ್ರೀಮಂತ ವಿವಾಹಿತ ಮಹಿಳೆ ಜೊತೆ ಪ್ರೇಮದ ನಾಟಕ: ಎಲ್ಲವನ್ನೂ ಮುಗಿಸಿ ಕೈ ಕೊಟ್ಟಿದ್ದ ಆರೋಪಿ ಅಂದರ್