ದೊಡ್ಡಬಳ್ಳಾಪುರ: ಕೌಟುಂಬಿಕ ಕಲಹ ಹಿನ್ನೆಲೆ ಗಂಡನ ಮನೆ ಬಿಟ್ಟು ತವರು ಮನೆಗೆ ಬಂದಿದ್ದ ಪತ್ನಿಯ ಊರಿಗೆ ಬಂದ ಪತಿ, ಮಾವನ ಜೊತೆ ಕುಡಿಯೋದಕ್ಕೆ ಎಂದು ಹೋಗಿದ್ದಾನೆ. ಈ ವೇಳೆ ಹೆಂಡತಿ ಜೊತೆ ಮೊಬೈಲ್ನಲ್ಲಿ ಮಾತನಾಡುತ್ತಲೇ ಮಾವನನ್ನ ಕೊಲೆ ಮಾಡಿದ ಅಳಿಯ ಅಲ್ಲಿಂದ ಪರಾರಿಯಾಗಿರುವ ಘಟನೆ ನಡೆದಿದೆ.
ಘಟನೆ ಹಿನ್ನೆಲೆ:ಕೋಲಾರ ಮೂಲದ ಪ್ರತಾಪ್ ದೊಡ್ಡಬಳ್ಳಾಪುರ ತಾಲೂಕಿನ ಆರೂಢಿ ಗ್ರಾಮದ ಯುವತಿಯನ್ನ ಮದುವೆಯಾಗಿದ್ದ, ಹೆರಿಗೆ ಕಾರಣಕ್ಕೆ ತವರಿಗೆ ಬಂದಿದ್ದ ಹೆಂಡತಿ ಕೌಟುಂಬಿಕ ಕಲಹದಿಂದ ತವರು ಮನೆಯಲ್ಲೇ ಉಳಿದಿದ್ದಳು. ಒಂದೂವರೆ ವರ್ಷದಿಂದ ಹೆಂಡತಿ ಗಂಡನ ಮನೆಗೆ ಹೋಗಿರಲಿಲ್ಲ. ಇನ್ನು ಮಗು ನೋಡಲು ಪತಿಗೆ ಅವಕಾಶವನ್ನೂ ಕೊಟ್ಟಿರಲಿಲ್ಲ. ಇದರಿಂದ ಪತಿ ಪ್ರತಾಪ್ಗೆ ಹೆಂಡತಿ ಮನೆಯವರ ಮೇಲೆ ಕೋಪ ಇತ್ತು. ನಿನ್ನೆ ಮತ್ತೆ ಮಗು ನೋಡಲೆಂದು ಪ್ರತಾಪ್ ಆರೂಢಿ ಗ್ರಾಮಕ್ಕೆ ಬಂದಿದ್ದ.
ಆಗಲೂ ಮನೆಯವರು ಮಗುವನ್ನ ನೋಡಲು ಪ್ರತಾಪ್ಗೆ ಬಿಟ್ಟಿರಲಿಲ್ಲ. ಇದರಿಂದ ಕೋಪಗೊಂಡ ಪ್ರತಾಪ್ ಮಾವ ಸುಬ್ಬರಾಯಪ್ಪನನ್ನ ಕರ್ಕೊಂಡು ಕುಡಿಯಲು ಹೋಗಿದ್ದಾನೆ. ಸಂಜೆಯಾದರೂ ತನ್ನ ತಂದೆ ಮನೆಗೆ ಬರದಿದ್ದಾಗ ಹೆಂಡತಿ ಗಂಡ ಪ್ರತಾಪ್ಗೆ ಕರೆ ಮಾಡಿದ್ದಾಳೆ. ಪೋನ್ನಲ್ಲಿ ಹೆಂಡತಿ ಜೊತೆ ಮಾತನಾಡುತ್ತಿರುವಾಗಲೇ ಪ್ರತಾಪ್, ಮಾವನ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ.