ಕರ್ನಾಟಕ

karnataka

ETV Bharat / state

ನಾಯಿ ಬೊಗಳಿದ್ದಕ್ಕೆ ನಾಡ ಬಂದೂಕಿನಿಂದ ಗುಂಡಿಕ್ಕಿ ಕೊಂದ ಪಾಪಿ - ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ

ಕೃಷ್ಣಪ್ಪ ಎಂಬವರು ತನ್ನನ್ನು ನೋಡಿ ಬೊಗಳಿತು ಎಂದು ನಾಡ ಬಂದೂಕಿನಿಂದ ನಾಯಿಗೆ ಗುಂಡು ಹಾರಿಸಿದ್ದಾರೆ. ತಪ್ಪಿಸಿಕೊಂಡು ಓಡಿಹೋದ ನಾಯಿಯನ್ನು ರಾಗಿ ಹೊಲದಲ್ಲಿ ಅಟ್ಟಾಡಿಸಿಕೊಂಡು ಶೂಟ್ ಮಾಡಿದ್ದಾರೆ.

Died Dog Rocky
ಗುಂಡೇಟಿಗೆ ಬಲಿಯಾದ ನಾಯಿ

By

Published : Sep 17, 2022, 9:07 PM IST

ದೊಡ್ಡಬಳ್ಳಾಪುರ: ನಾಯಿ ಬೊಗಳಿದ್ದಕ್ಕೆ ಕೋಪಗೊಂಡ ಪಾಪಿ ನಾಡ ಬಂದೂಕಿನಿಂದ ಗುಂಡಿಕ್ಕಿ ಕೊಂದಿದ್ದಾನೆ. ಈ ಗುಂಡಿನ ದಾಳಿಯಲ್ಲಿ 5 ವರ್ಷದ ರಾಕಿ ಹೆಸರಿನ ನಾಯಿ ಸ್ಥಳದಲ್ಲೇ ಸಾವನ್ನಪ್ಪಿದೆ. ದೊಡ್ಡಬಳ್ಳಾಪುರ ತಾಲೂಕಿನ ಮಾದಗೊಂಡನಹಳ್ಳಿಯಲ್ಲಿ ಇಂದು ಮಧ್ಯಾಹ್ನ ಘಟನೆ ನಡೆದಿದ್ದು, ಘಟನೆಯಲ್ಲಿ ಹರೀಶ್ ಅವರ 5 ವರ್ಷದ ನಾಯಿ ರಾಕಿ ಗುಂಡೇಟಿಗೆ ಸಾವನ್ನಪ್ಪಿದೆ. ಕೃಷ್ಣಪ್ಪ ಆರ್ಭಟಕ್ಕೆ ಮೂಕ ಪ್ರಾಣಿ ಬಲಿಯಾಗಿದೆ.

ಹರೀಶ್ ಅವರು ತಮ್ಮ ಸಹೋದರಿ ನೀಡಿದ ನಾಯಿ ರಾಕಿಯನ್ನು ಬಹಳ ಮುದ್ದಿನಿಂದ ಸಾಕಿದ್ದರು. ಇವತ್ತಿನವರೆಗೂ ಯಾರ ತಂಟೆಗೂ ಹೋಗಿರಲಿಲ್ಲ ಮತ್ತು ಯಾರಿಗೂ ಕಚ್ಚಿರಲಿಲ್ಲ, ನಾಯಿಯ ಮೂಕ ಪ್ರೀತಿಗೆ ಗ್ರಾಮಸ್ಥರು ಸಹ ಮನ ಸೋತಿದ್ದರು.

ಗ್ರಾಮದಲ್ಲಿ ಹಂದಿ ಸಾಕಣೆ ಮಾಡುತ್ತಿದ್ದ ಕೃಷ್ಣಪ್ಪ ಸಹ ಏಳೆಂಟು ನಾಯಿ ಸಾಕಿದ್ದಾರೆ. ಆದರೆ, ಇಂದು ರಾಕಿ ನಾಯಿ ತನ್ನನ್ನು ನೋಡಿ ಬೊಗಳಿತೆಂದು ಹಂದಿ ಬೇಟೆಗೆ ಬಳಸುವ ನಾಡಬಂದೂಕಿನಿಂದ ಗುಂಡು ಹಾರಿಸಿದ್ದಾರೆ. ತಪ್ಪಿಸಿಕೊಂಡು ಓಡಿಹೋದ ನಾಯಿಯನ್ನು ರಾಗಿ ಹೊಲದಲ್ಲಿ ಅಟ್ಟಾಡಿಸಿಕೊಂಡು ಶೂಟ್ ಮಾಡಿದ್ದಾರೆ. ಏಳೆಂಟು ಗುಂಡೇಟು ತಿಂದ ರಾಕಿ ಸ್ಥಳದಲ್ಲೇ ಸಾವನ್ನಪ್ಪಿದೆ.

ನಾಯಿ ಬೊಗಳಿದಕ್ಕೆ ನಾಡ ಬಂದೂಕಿನಿಂದ ಗುಂಡಿಕ್ಕಿ ಕೊಂದ ಪಾಪಿ

ಕೃಷ್ಣಪ್ಪನ ಬಳಿ ಎರಡು ಮೂರು ಬಂದೂಕುಗಳಿವೆ. ಆದರೆ ಯಾವ ಬಂದೂಕಿಗೂ ಲೈಸೆನ್ಸ್ ಇಲ್ಲ. ನಾಯಿ ಕೊಂದಿದ್ಯಾಕೆಂದು ಕೇಳಲು ಹೋದರೆ ದರ್ಪದ ಮಾತನಾಡಿದ್ದಾರೆ. ಕೊನೆಗೆ ಪ್ರಾಣಿ ಪಕ್ಷಿಗಳ ದಾಸೋಹ ಸೇವಾ ಟ್ರಸ್ಟ್ ಸಹಾಯವನ್ನು ಹರೀಶ್ ಕೇಳಿದ್ದಾರೆ. ಟ್ರಸ್ಟ್ ಸಹಾಯದಿಂದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ದೊಡ್ಡಬಳ್ಳಾಪುರ ಪಶು ಆಸ್ಪತ್ರೆಯಲ್ಲಿ ನಾಯಿಯ ಮರಣೋತ್ತರ ಪರೀಕ್ಷೆ ಮಾಡಲಾಗಿದ್ದು, ನಾಯಿಯ ದೇಹದಲ್ಲಿ 7 ರಿಂದ 8 ಗುಂಡೇಟುಗಳಿವೆ. ಒಳರಕ್ತಸ್ರಾವದಿಂದ ನಾಯಿ ಮೃತಪಟ್ಟಿದೆ ಎಂಬುದು ಪಶುವೈದ್ಯರ ಅಭಿಪ್ರಾಯವಾಗಿದೆ.

ಇದನ್ನೂ ಓದಿ:ಶಿರಹಟ್ಟಿಯಲ್ಲಿ 7 ಕುರಿ, ನಾಯಿ ಬಲಿ.. ತೋಳದ ದಾಳಿ ಎಂದ ಅರಣ್ಯ ಇಲಾಖೆ

ABOUT THE AUTHOR

...view details