ದೊಡ್ಡಬಳ್ಳಾಪುರ: ಕಾಮಗಾರಿಗೆಂದು ನಿರ್ಮಾಣ ಮಾಡಲಾಗಿದ್ದ ಹಳ್ಳಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ನಗರದ ರೈಲ್ವೆ ಸ್ಟೇಷನ್ ಬಳಿ ಇಂದು ನಡೆದಿದೆ. ವಿ ಉಮೇಶ್ (42) ಮೃತ ವ್ಯಕ್ತಿ. ಕಳೆದ ಮೂರು ದಿನಗಳಿಂದ ತಾಲೂಕಿನಲ್ಲಿ ಭಾರಿ ಮಳೆಯಾಗುತ್ತಿದೆ. ಈ ವೇಳೆ, ಇಲ್ಲಿಯ ರೈಲ್ವೆ ಅಂಡರ್ ಪಾಸ್ ಬಳಿ ಕಾಮಾಗಾರಿಗಾಗಿ ನಿರ್ಮಾಣ ಮಾಡಲಾಗಿದ್ದ ಹಳ್ಳಕ್ಕೆ ಮಳೆ ನೀರು ಹರಿದು ಬಂದಿದೆ. ಇದಿರಿಂದ ಹಳ್ಳ ಸಂಪೂರ್ಣವಾಗಿ ತುಂಬಿದೆ. ಇದೇ ಮಾರ್ಗದಲ್ಲಿ ಹೋಗುತ್ತಿದ್ದ ಉಮೇಶ್ ಕಾಲು ಜಾರಿ ಹಳ್ಳಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ.
ಮೃತನ ದೇಹದ ಅಂಗಿಯಲ್ಲಿ ದೊರೆತ ಆಧಾರ್ ಕಾರ್ಡ್ ನಿಂದ ಗುರುತು ಪತ್ತೆಯಾಗಿದೆ, ಮೃತ ವ್ಯಕ್ತಿ ದೊಡ್ಡಬಳ್ಳಾಪುರ ತಾಲೂಕಿನ ಕೋಡಿಹಳ್ಳಿಯ ನಿವಾಸಿ ಎಂದು ತಿಳಿದು ಬಂದಿದೆ. ಮತ್ತೊಂದು ಮೂಲದ ಪ್ರಕಾರ ಮೃತ ವ್ಯಕ್ತಿ ಕುಡಿದ ಮತ್ತಿನಲ್ಲಿ ಹಳ್ಳಕ್ಕೆ ಬಿದ್ದಿದ್ದಾರೆ ಎಂದು ಹೇಳಲಾಗಿದೆ. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ರಾಜ್ಯದ ವಿವಿಧೆಡೆ ಭಾರೀ ಗಾಳಿ ಸಹಿತ ಮಳೆ.. ಏಳು ಮಂದಿ ಸಾವು, ಜನಜೀವನ ಅಸ್ತವ್ಯಸ್ತ
ಇನ್ನು ನಿನ್ನೆದಿನ ರಾಜ್ಯದ ವಿವಿಧೆಡೆ ಗಾಳಿ ಸಹಿತ ಭಾರೀ ಮಳೆ ಸುರಿದಿದ್ದು, ಅನೇಕ ಅವಾಂತರಗಳು ಸುಷ್ಟಿಯಾಗಿವೆ. ಮಳೆಯಿಂದಾಗಿ ಕೊಪ್ಪಳ, ಬಳ್ಳಾರಿ, ಮೈಸೂರು, ಚಿಕ್ಕಮಗಳೂರು, ಬೆಂಗಳೂರು ಸೇರಿದಂತೆ ಅನೇಕ ಕಡೆಗಳಲ್ಲಿ ಸಾವು ನೋವು ಸಂಭವಿಸಿವೆ.
ಮೈಸೂರಿನಲ್ಲಿ ಕಳೆದ ಎರಡುದಿನಗಳಿಂದ ಬಿಟ್ಟು ಬಿಡದೆ ಗುಡುಗು ಸಹಿತ ಮಳೆಯಾಗಿದೆ. ಪರಿಣಾಮ ಜಿಲ್ಲೆಯಲ್ಲಿ ಒಟ್ಟು 3 ಜನ ಸಾವನ್ನಪ್ಪಿದ್ದಾರೆ. ಪಿರಿಯಾಪಟ್ಟಣದ ಬೆಟ್ಟದಪುರ ಹತ್ತಿರದ ಅವರ್ತಿ ಗ್ರಾಮದ ರೈತ ಲೋಕೇಶ್ (55), ಹುಣಸೂರು ತಾಲೂಕಿನ ಮಂಟಿಕೊಪ್ಪಲು ಗ್ರಾಮದ ರೈತ ಹರೀಶ್ ಸಿಡಿಲಿಗೆ ಬಲಿಯಾಗಿದ್ದಾರೆ.