ದೊಡ್ಡಬಳ್ಳಾಪುರ : ಯುವತಿಯೊಬ್ಬಳು ಜೀವ ಬೆದರಿಕೆ ಮತ್ತು ಕಿರುಕುಳ ಪ್ರಕರಣ ದಾಖಲಿಸಿದ್ದರಿಂದ ಮನನೊಂದು ಉದ್ಯಮಿ ನೇಣಿಗೆ ಶರಣಾಗಿದ್ದಾರೆ. ನಗರದ ಕರೇನಹಳ್ಳಿಯಲ್ಲಿ ಉದ್ಯಮಿ ರಾಜಣ್ಣ (55) ತಮ್ಮ ಮನೆಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನೆ ಹಿನ್ನೆಲೆ :ಮೃತ ರಾಜಣ್ಣನ ಮಗ ಜಿಮ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದು, ಈ ಸಮಯದಲ್ಲಿ ಯುವತಿಯೊಬ್ಬಳನ್ನು ಪರಿಚಯ ಮಾಡಿಕೊಂಡು ಆಕೆಯೊಂದಿಗೆ ಲೈಂಗಿಕ ಸಂಪರ್ಕ ಮಾಡಿರುತ್ತಾನೆ. ಈ ಸಂಬಂಧ 7 ಮೇ 2019 ರಂದು ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಆರೋಪಿ ಗೌತಮ್ ಮತ್ತು ಆತನ ತಂದೆ ರಾಜಣ್ಣ ಜೈಲು ಪಾಲಾಗಿ, ಬಳಿಕ ಬೇಲ್ ಪಡೆದು ಜೈಲಿನಿಂದ ಹೊರ ಬಂದಿದ್ದರು.
ಸದ್ಯ, ಸಂತ್ರಸ್ತ ಯುವತಿ ಮಗುವಿಗೆ ಜನ್ಮ ನೀಡಿದ್ದು, ಮಗುವಿನ ತಂದೆ ಗೌತಮ್ ಎಂಬುದನ್ನು ಸಾಬೀತುಪಡಿಸಲು ಡಿಎನ್ಎ ಟೆಸ್ಟ್ ನಡೆಯಲಿದೆ. ಈ ನಡುವೆ ಗೌತಮ್ ಮತ್ತು ರಾಜಣ್ಣ ಸಂತ್ರಸ್ತ ಯುವತಿಗೆ ಜೀವ ಬೆದರಿಕೆಯೊಡ್ಡಿ ಕಿರುಕುಳ ನೀಡಿ ಕೇಸ್ ವಾಪಸ್ ಪಡೆಯುವಂತೆ ಬೆದರಿಕೆ ಹಾಕಿದ್ದಾಗಿ 28 ಮಾರ್ಚ್ 20121 ರಂದು ದೊಡ್ಡಬಳ್ಳಾಪುರ ನಗರ ಠಾಣೆಯಲ್ಲಿ ಜೀವ ಬೆದರಿಕೆ ಮತ್ತು ಕಿರುಕುಳ ಪ್ರಕರಣ ದಾಖಲಾಗಿದೆ. ಇದರಿಂದ ಮನನೊಂದು ರಾಜಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗ್ತಿದೆ.