ಯಲಹಂಕ: ಯಲಹಂಕದ ರೈಲು ಮತ್ತು ಅಚ್ಚು ಕಾರ್ಖಾನೆಯ ಆವರಣದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದೆ. ಕಾರ್ಖಾನೆಯ ಹುಲ್ಲುಗಾವಲು ಪ್ರದೇಶದಲ್ಲಿ ಚಿರತೆ ಓಡಾಡುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಷಯ ತಿಳಿದ ತಕ್ಷಣವೇ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಚಿರತೆ ಸೆರೆಗಾಗಿ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.
ಯಲಹಂಕದ ರೈಲು ಮತ್ತು ಅಚ್ಚು ಕಾರ್ಖಾನೆ ಸುಮಾರು 190 ಎಕರೆ ವಿಸ್ತೀರ್ಣ ಹೊಂದಿದ್ದು, ಇದರಲ್ಲಿ ಸುಮಾರು 50 ಎಕರೆ ಪ್ರದೇಶದಲ್ಲಿ ಹುಲ್ಲುಗಾವಲು ಮತ್ತು ಮರ ಗಿಡಗಳಿವೆ. ಕಳೆದ ಶನಿವಾರ ರಾತ್ರಿ ಹುಲ್ಲುಗಾವಲಿನ ಪ್ರದೇಶದಲ್ಲಿ ಚಿರತೆ ಓಡಾಡಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದರಿಂದಾಗಿ ಸ್ಥಳೀಯ ಜನತೆ ಆತಂಕಕ್ಕೊಳಗಾಗಿದೆ.