ಆನೇಕಲ್:ಆನೇಕಲ್ ತಿಮ್ಮರಾಯಸ್ವಾಮಿ ಜಾತ್ರೆಯ ಆಚರಣೆಯ ಹಿಂದೆ ಮಹತ್ವದ ಉದ್ದೇಶವಿದೆ. ಜಾತ್ರೆಯ ಮೂಲಕ ಸಮುದಾಯಗಳ ನಡುವೆ ಪ್ರೀತಿ, ಗೌರವ, ವಿಶ್ವಾಸ ಗಟ್ಟಿಗೊಳಿಸುವ ಉದ್ದೇಶವಿದೆ.
ಉದ್ಭವ ಮೂರ್ತಿ ಆನೇಕಲ್ ತಿಮ್ಮರಾಯಸ್ವಾಮಿ ಅದ್ದೂರಿ ಜಾತ್ರೆ ತಿಮ್ಮರಾಯ ಅನ್ನೋ ಹೆಸರೇ ಬೆವರು ಸುರಿಸುವ ಜನರ ನಡುವಿನ ನಾಮವಾಗಿ ಜನರಿಗೆ ಪರಿಚಿತ. ಆನೇಕಲ್ ಹಳೆಯ ಹೆಸರಾದರೂ ಆಡು ಭಾಷೆಯ ಸೊಗಡಿನಲ್ಲಿ ಆನೆಗಳು ಹೆಚ್ಚು ಓಡಾಡಿದ ನೆಲೆಯಾಗಿ, ಅವುಗಳನ್ನ ಕಲ್ಲುಗಳಿಂದ ಓಡಿಸುವ ಪುರಾತನ ರೂಢಿಯೇ ಈ ಹೆಸರಿಗೆ ಕಾರಣವಿರಬಹುದು ಎಂದು ಹೇಳುತ್ತಾರೆ. ಸಣ್ಣ ಬಂಡೆ ನೆಲದ ಮೇಲೆ ಎದ್ದು ಕಾಣಿಸಿದ್ದರಿಂದ ಪೂರ್ವಿಕರು ಈ ಕಲ್ಲಿಗೆ ತಿಮ್ಮರಾಸ್ವಾಮಿ ಎಂದು ಹೆಸರಿಸಿ ಪೂಜಿಸತೊಡಗಿದ್ದರು ಎಂದು ಹೇಳಲಾಗುತ್ತದೆ.
ದೇವಾಲಯದ ಕಟ್ಟಡದ ಅಡಿ ಭಾಗದಲ್ಲಿರುವ ಕೆತ್ತನೆಯಲ್ಲಿ 1835ರಲ್ಲಿ ಒಮ್ಮೆ ಜೀರ್ಣೋದ್ದಾರವಾದ ದಾಖಲೆ ಸಿಗುತ್ತದೆ. ಅಂತೆಯೇ ಈ ಬಾರಿಯೂ ಪ್ರತಿ ವರ್ಷದಂತೆ ಜಾತ್ರೆ ನಡೆಯಿತು. ಯುಗಾದಿ ನಂತರ ತಿಮ್ಮರಾಯಸ್ವಾಮಿ ರಥೋತ್ಸವ ನಡೆಯುತ್ತದೆ. ತಿಮ್ಮರಾಯಸ್ವಾಮಿ ಬ್ರಹ್ಮರಥೋತ್ಸವ ಹಿನ್ನೆಲೆಯಲ್ಲಿ ಮೂಲ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ರಥೋತ್ಸವ ಅಂಗವಾಗಿ ದೇವರಿಗೆ ಗರುಡೋತ್ಸವ ಸೇವೆಯೊಂದಿಗೆ ಕರಗ ಉತ್ಸವ ನಡೆಸಲಾಗುತ್ತದೆ.
ತಿಮ್ಮರಾಯಸ್ವಾಮಿ ಉತ್ಸವ ಮೂರ್ತಿಯನ್ನು ರಥದಲ್ಲಿ ಇರಿಸಿ ದೇವಸ್ಥಾನದ ಸುತ್ತಾ ಒಂದು ಸುತ್ತು ಪ್ರದಕ್ಷಿಣೆ ಮಾಡುತ್ತಾರೆ. ಭಕ್ತರು ತಿಮ್ಮರಾಯಸ್ವಾಮಿ ರಥಕ್ಕೆ ಭಕ್ತಿಯಿಂದ ಬಾಳೆಹಣ್ಣು, ಮೆಣಸು ಹಾಗೂ ಏಲಕ್ಕಿಯನ್ನು ಅರ್ಪಿಸಿ ಹರಕೆ ಹೊತ್ತರೆ ಇಷ್ಟಾರ್ಥ ಸಿದ್ಧಿಸುತ್ತದೆ ಎಂಬುದು ಅವರ ನಂಬಿಕೆ. ಮಕ್ಕಳಿಲ್ಲದವರೂ ತಿಮ್ಮರಾಯಸ್ವಾಮಿಗೆ ಹರಕೆ ಹೊತ್ತರೆ ಮಡಿಲು ತುಂಬುತ್ತದೆಂಬ ನಂಬಿಕೆಯೂ ಇದೆ.
ಮಾನಸಿಕ ವೇದನೆಗಳಿಗೆ ಮುಕ್ತಿ ನೀಡುವ ಹಾಗೂ ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡುವ ಕ್ಷೇತ್ರ ಎಂದೇ ಖ್ಯಾತಿ ಹೊಂದಿರುವ ತಿಮ್ಮರಾಯಸ್ವಾಮಿ ರಥೋತ್ಸವ ಜನರಿಗೆ ಒಂದು ದೊಡ್ಡ ಹಬ್ಬ. ಭಕ್ತರಂತೂ ಜಾತ್ರೆಯಲ್ಲಿ ಗೋವಿಂದ ಗೋವಿಂದ ಎಂದು ಸ್ಮರಿಸುತ್ತಾ ತಿಮ್ಮರಾಯಸ್ವಾಮಿ ದೇವರನ್ನು ಸ್ಮರಿಸುತ್ತಾರೆ.