ದೊಡ್ಡಬಳ್ಳಾಪುರ :ಮನೆಗೆ ಆಧಾರವಾಗಿದ್ದ ಯಜಮಾನ ಅಂಗವೈಕಲ್ಯದಿಂದ ಮೂಲೆ ಸೇರಿದ. ಕುಂಟುಂಬಕ್ಕೆ ಬೆನ್ನೆಲುಬು ಆಗಬೇಕಿದ್ದ ಹಿರಿಯ ಮಗ ಮನೆಯನ್ನೇ ತೊರೆದಿದ್ದಾನೆ. ಇದೀಗ ತನ್ನ ಸಂಸಾರದ ಎಲ್ಲಾ ಸದಸ್ಯರನ್ನು ಆರೈಕೆ ಮಾಡಬೇಕಾದ ತಾಯಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾಳೆ. ಪರಿಸ್ಥಿತಿ ಹೀಗಿರುವಾ ಮನೆಯ ಕಷ್ಟವನ್ನು ನೋಡಲಾರದೆ ಮಗಳೇ ಕುಟುಂಬಕ್ಕೆ ಹೆಗಲು ಕೊಟ್ಟು ಮುನ್ನಡೆಸುತ್ತಿದ್ದಾಳೆ.
ಹೌದು, ಇಂಥಹ ದುಸ್ಥಿತಿಯನ್ನು ತಾಲೂಕಿನ ಕುಟುಂಬವೊಂದು ಎದುರಿಸುತ್ತಿದೆ. ಮನೆಯ ಸದಸ್ಯರನ್ನು ಸಾಕಲು ತಾನೇ ಶಾಲೆ ಬಿಟ್ಟ ಬಾಲಕಿ ಕೂಲಿ, ನಾಲಿ ಮಾಡಿ ಇಡೀ ಕುಟುಂಬದ ಜವಾಬ್ದಾರಿ ಹೊತ್ತಿದ್ದಾಳೆ. ಈ ಕಷ್ಟಗಳ ನಡುವೆ ಮಳೆ ಬಂದು ಮನೆಯಲ್ಲಿದ್ದ ರೇಷನ್ ಕಾರ್ಡ್ ಸಹ ಕಳೆದುಕೊಂಡು ಊಟಕ್ಕೂ ಪರದಾಡಬೇಕಾದ ಅಸಹಾಯಕ ಸ್ಥಿತಿಯಲ್ಲಿ ಈ ಬಡ ಕುಟುಂಬ ಬದುಕುತ್ತಿದೆ.
ಓದುವ ವಯಸ್ಸಲ್ಲಿ ಕುಟುಂಬ ನಿರ್ವಹಣೆ ಮಾಡುತ್ತಿರುವ ಬಾಲಕಿ ಇಕ್ಕಟ್ಟಾದ ಪುಟ್ಟ ಗುಡಿಸಲಿನಲ್ಲೇ ವಾಸ.. ತಾಲೂಕಿನ ಮಾಡೇಶ್ವರ ಗ್ರಾಮದಲ್ಲಿ ಈ ಪುಟ್ಟ ಗುಡಿಸಲಿನಲ್ಲಿ ಕುಟುಂಬದ ನಾಲ್ವರು ಬದುಕು ಸಾಗಿಸುತ್ತಿದ್ದಾರೆ. ಗುಡಿಸಲಿನ ಪಕ್ಕದಲ್ಲಿ ಕಟ್ಟಿರುವ ಮೇಕೆಗಳ ಕೊಟ್ಟಿಗೆಯೇ ಎಷ್ಟೋ ವಾಸಿ, ಯಾಕೆಂದರೆ ಅದನ್ನು ಸಿಮೆಂಟ್ ಮತ್ತು ಇಟ್ಟಿಗೆಯಿಂದ ಭದ್ರವಾಗಿ ಕಟ್ಟಲಾಗಿದೆ. ಆದರೆ ಈ ಬಡಪಾಯಿಗಳು ವಾಸವಾಗಿರುವ ಗುಡಿಸಲು ಕೋಳಿ ಗೂಡಿಗಿಂತ ಕಡೆಯಾಗಿದೆ.
ರಾತ್ರಿ ಕಳೆಯಲು ಮೇಣದ ದೀಪ ಅಥವಾ ಎಣ್ಣೆ ದೀಪ ಆಧಾರ. ಇದೇ ಮಂದ ಬೆಳಕಿನಲ್ಲಿ ಬಾಲಕನ ವಿದ್ಯಾಭ್ಯಾಸ ನಡೆಯುತ್ತೆ. ಅಡುಗೆ ಮಾಡಲು ಗುಡಿಸಲ ಹೊರಗೆ ಒಲೆ ಹಾಕಲಾಗಿದ್ದು, ಅಲ್ಲಿಯೇ ಆಹಾರ ತಯಾರಿಸಲಾಗುತ್ತೆ. ಬೇಸಿಗೆಯಲ್ಲಿ ಹೇಗೋ ನಡೆಯುವ ಜೀವನ ಮಳೆಗಾಲ ಬಂದಾಗ ನರಕ ದರ್ಶನವಾಗುತ್ತೆ. ಗುಡಿಸಲ ಹಿಂಭಾಗದಲ್ಲಿನ ಬಂಡೆಗಳಿಂದ ಬರುವ ನೀರು ನೇರವಾಗಿ ಗುಡಿಸಲಿಗೆ ನುಗ್ಗುತ್ತೆ, ಕೊರೆಯುವ ಚಳಿ, ನೆಂದ ಬಟ್ಟೆಗಳಲ್ಲೇ ಇಡೀ ರಾತ್ರಿ ಕಳೆಯಬೇಕು.
ಹಾಸಿಗೆ ಹಿಡಿದಕುಟುಂಬದ ಯಜಮಾನ.. ಕಟ್ಟಡ ಕಟ್ಟುವ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಮನೆಯ ಯಜಮಾನ ನರಸಿಂಹಯ್ಯ ಕುಟುಂಬ ನಿರ್ವಹಣೆ ಮಾಡುತ್ತಿದ್ದ. 20 ವರ್ಷಗಳ ಹಿಂದೆ ಸೆಂಟ್ರಿಂಗ್ ಕೆಲಸ ಮಾಡುವ ಸಮಯದಲ್ಲಿ ಗಾಯಗೊಂಡು ನಡೆಯುವುದಕ್ಕೂ ಸಾಧ್ಯವಾಗದ ಸ್ಥಿತಿಯಲ್ಲಿ ಅಂಗವೈಕಲ್ಯತೆಗೆ ತುತ್ತಾಗಿದ್ದಾನೆ. ಆತನ ಪತ್ನಿ ಮುನಿರತ್ನಮ್ಮ ಮಾನಸಿಕ ಖಿನ್ನತೆಗೆ ತುತ್ತಾಗಿ ದುಡಿಯುವ ಪರಿಸ್ಥಿತಿಯಲ್ಲಿ ಇಲ್ಲ. ಮನೆಯ ಹಿರಿಯ ಮಗ ಮನೆ ಬಿಟ್ಟು ಬೆಂಗಳೂರು ಸೇರಿದ್ದಾನೆ. ಎಳನೀರು ವ್ಯಾಪಾರ ಮಾಡುವ ಆತ ತನ್ನ ಕುಟುಂಬದ ಬಗ್ಗೆ ತಲೆಕೆಡಿಸಿಕೊಳ್ಳದೆ ತನ್ನ ಪಾಡಿಗೆ ಇದ್ದಾನೆ.
ಕಿರಿಯ ಸಹೋದರನಿಗೆ ಓದಿಸುವ ಜವಾಬ್ದಾರಿ.. ಕಿರಿಯ ಮಗ ಅರುಣ್ ಹೈಸ್ಕೂಲ್ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಮನೆಯಲ್ಲಿನ ಕಷ್ಟಗಳನ್ನ ಕಂಡು ಸುಮ್ಮನಿರಲಾಗದೆ ಮಗಳು ಅನಿತಾ ಶಾಲೆ ಬಿಟ್ಟು ಎರಡು ವರ್ಷಗಳಿಂದ ಕೂಲಿಗೆ ಹೋಗುತ್ತಿದ್ದಾಳೆ. ಕೂಲಿ ಕೆಲಸಕ್ಕೆ ಹೋಗಿ ದಿನಕ್ಕೆ 250 ರೂಪಾಯಿ ಸಂಪಾದಿಸುವ ಅನಿತಾಳ ದುಡಿಮೆಯೇ ಕುಟುಂಬಕ್ಕೆ ಆಧಾರವಾಗಿದೆ.
ಬಡಪಾಯಿಗಳಿಗಿಲ್ಲ ಸೂರು.. ಗುಡಿಸಲು ಮುಕ್ತ ರಾಜ್ಯವನ್ನಾಗಿ ಮಾಡಬೇಕೆಂಬುದು ಸರ್ಕಾರಗಳ ಧ್ಯೇಯ ವಾಕ್ಯ. ಬಡವರಿಗೆ ಸೂರು ಕೊಡಲು ಆಶ್ರಯ ಯೋಜನೆಯಡಿ ಸಾವಿರಾರು ಕೋಟಿ ಹಣ ವ್ಯಯ ಮಾಡುತ್ತಿದೆ ಸರ್ಕಾರ. ಆದರೆ ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ಈ ಕುಟುಂಬಕ್ಕೆ ಮಾತ್ರ ಇನ್ನೂ ಸೂರು ದೊರೆತಿಲ್ಲ. ತಾಲೂಕು ಆಡಳಿತವಾಗಲಿ, ಸ್ಥಳೀಯ ಪಂಚಾಯತ್ ಅಧಿಕಾರಿಗಳೇ ಆಗಲಿ ಯಾರೂ ಕೂಡ ಇವರತ್ತ ತಿರುಗಿಯೂ ನೋಡಿಲ್ಲವಂತೆ.
ಇದ್ದ ರೇಷನ್ ಕಾರ್ಡು ಮಳೆಯಲ್ಲಿ ಕೊಚ್ಚಿಹೋಯ್ತು.. ಸರ್ಕಾರ ನೀಡಿದ ರೇಷನ್ ಕಾರ್ಡ್ ಮಳೆಗೆ ಕೊಚ್ಚಿಕೊಂಡು ಹೋಗಿದ್ದು, ಈಗ ಉಚಿತ ರೇಷನ್ ಕೂಡ ಈ ಕುಟುಂಬಕ್ಕೆ ಸಿಗುತ್ತಿಲ್ಲ. ಚುನಾವಣಾ ಸಮಯದಲ್ಲಿ ಬರೀ ಮತಕ್ಕಾಗಿ ಬರುವ ಚುನಾಯಿತ ಪ್ರತಿನಿಧಿಗಳು ನಂತರ ಯಾರೂ ಕೂಡ ಇವರ ಮನೆಯ ಕಡೆ ಮುಖ ಸಹ ಹಾಕುತ್ತಿಲ್ಲ. ಸ್ಥಳೀಯ ಅಧಿಕಾರಿಗಳು ಇವರಿಗೆ ರೇಷನ್ ಸಿಗುವಂತೆಯೂ ಸಹ ಮಾಡಿಲ್ಲ. ಯಾವುದೇ ಸರ್ಕಾರಿ ಸೌಲಭ್ಯಗಳು ಈ ಕುಟುಂಬಕ್ಕೆ ಸಿಗದಿರುವುದು ವಿಪರ್ಯಾಸ.
ಇತರ ಮಕ್ಕಳಂತೆ ಓದಿ ವಿದ್ಯಾಭ್ಯಾಸ ಮಾಡಿ ತನ್ನ ಬಾಲ್ಯವನ್ನು ಕಳೆಯಬೇಕಾದ ಹೆಣ್ಣು ಮಗಳು, ಇಂದು ಸಂಸಾರದ ನೌಕೆಯನ್ನು ಹಿಡಿದಿದ್ದಾಳೆ. ಇವಳು ದುಡಿದರೆ ಮಾತ್ರ ಕುಟುಂಬದ ಎಲ್ಲರಿಗೂ ಊಟ ಇಲ್ಲದಿದ್ದರೆ ತಣ್ಣೀರ ಬಟ್ಟೆಯೇ ಇವರಿಗೆ ಗತಿ. ಇನ್ನಾದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಕುಟುಂಬದ ನೆರವಿಗೆ ಬಂದು, ಅವರ ಕಷ್ಟಕ್ಕೆ ಸ್ಪಂದಿಸಬೇಕಿದೆ.