ಬೆಂಗಳೂರು:ದೇವನಹಳ್ಳಿ ಎಂದರೆ ಎಲ್ಲರ ಬಾಯಲ್ಲೂ ಇಲ್ಲಿನ ರಿಯಲ್ ಎಸ್ಟೇಟ್ ವ್ಯವಹಾರ ಬಗ್ಗೆ ಮಾತು ಕೇಳಿ ಬರುತ್ತೆ. ಇಲ್ಲಿನ ಭೂಮಿ ಚಿನ್ನದ ಬೆಲೆ ಬಾಳುತ್ತಿದೆ. ಸ್ವಲ್ಪ ಯಾಮಾರಿದ್ರೂ ಸಾಕು ಭೂಗಳ್ಳರು ಅಧಿಕಾರಿಗಳೊಂದಿಗೆ ಶಾಮೀಲಾಗಿ ರಾತ್ರೋರಾತ್ರಿ ಇನ್ನಾರದ್ದೋ ಜಮೀನನ್ನು ಮತ್ತ್ಯಾರಿಗೋ ಮಾರಾಟ ಮಾಡಿಬಿಡ್ತಾರೆ. ಈಗ ನಾವು ಹೇಳ ಹೊರಟಿರೋ ಕಥೆಯೂ ಇಂತಹದ್ದೇ ಒಂದು ಗೋಲ್‌ಮಾಲ್.
9 ವರ್ಷದ ಬಾಲಕನಿಗೆ 4 ಎಕರೆ ಜಮೀನು ಮಂಜೂರು ಮಾಡಿಸಿದ್ದಾರೆ ಖತರ್ನಾಕ್ ಖದೀಮರು. ಅಂದಹಾಗೆ ದೇವನಹಳ್ಳಿ ತಾಲೂಕಿನ ಇಲ್ತೊರೆ ಗ್ರಾಮದಲ್ಲಿ ಮುನಿಯಪ್ಪ ಎಂಬುವವರಿಗೆ 1965 ರಲ್ಲಿ ಸರ್ವೇ ನಂಬರ್ 159ರಲ್ಲಿ 4 ಎಕರೆ ಗೋಮಾಳ ಜಮೀನು ಮಂಜೂರಾಗಿದ್ದು, ಬಳಿಕ ಈ ಜಮೀನನ್ನು 2007ರಲ್ಲಿ ಅದೇ ಗ್ರಾಮದ ಅಂಬುಜಾ ಎಂಬುವರಿಗೆ ಮಾರಾಟ ಮಾಡಿದ್ದಾರೆ.
ಅಂಬುಜಾ ಈ ಜಮೀನನ್ನು ನೀರಜ್ ಮೌರ್ಯ ಎಂಬುವರಿಗೆ 2010ರಲ್ಲಿ ಮಾರಾಟ ಮಾಡಿರುವಂತೆ ಸೇಲ್ ಡೀಡ್ ಸಹ ಮಾಡಿಸಿದ್ದಾರೆ. ಆದರೆ, ಬೆಂಗಳೂರು ಮೂಲದ ನೀರಜ್ ಮೌರ್ಯ ಎಂಬಾತ ಈ ಜಮೀನಿನಲ್ಲಿ ಲೇಔಟ್ ಮಾಡಿಸಲು ಭೂ ಪರಿವರ್ತನೆ ಮಾಡಿಸಲು ಮುಂದಾಗಿದ್ದು, ಈ ವೇಳೆ ದಾಖಲೆಗಳ ಪರಿಶೀಲನೆ ಮಾಡುವ ವೇಳೆ ಸರ್ವೇ ನಂಬರ್ 159 ರಲ್ಲಿರುವ 4 ಎಕರೆ ಜಮೀನಿನ ಕುರಿತ ಮಾಹಿತಿ ಪರಿಶೀಲನೆ ಮಾಡುವಾಗ ಭೂಗಳ್ಳರ ಅಸಲಿ ಮುಖ ಬಯಲಾಗಿದೆ.