ಬೆಂಗಳೂರು:ಕೋವಿಡ್ 2ನೇ ಅಲೆ ನಿಯಂತ್ರಣಕ್ಕೆ ನಗರದ ಸುಮಾರು 60 ಕಡೆಗಳಲ್ಲಿ ಟ್ರಯಾಜಿಂಗ್ ಸೆಂಟರ್ ಹಾಗೂ ಕೋವಿಡ್ ಕೇರ್ ಸೆಂಟರ್ಗಳನ್ನು ಆರಂಭಿಸಲಾಗಿತ್ತು. ಈ ಪೈಕಿ 30 ಕಡೆಗಳಲ್ಲಿ 10ಕ್ಕಿಂತ ಹೆಚ್ಚು ಬೆಡ್ಗಳಿವೆ. ಎಲ್ಲಾ ಸೇರಿ ಸುಮಾರು 3 ಸಾವಿರ ಬೆಡ್ಗಳಿದ್ದವು. ಇದೀಗ 55 ಕೋವಿಡ್ ಕೇರ್ ಕೇಂದ್ರಗಳನ್ನು ಬಂದ್ ಮಾಡಿದ್ದು, ಹತ್ತರಲ್ಲಿ ಕೇವಲ 40 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಪ್ರಸ್ತುತ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿರುವುದರಿಂದ ಆಸ್ಪತ್ರೆಗೆ ಹಾಗೂ ಸಿಸಿಸಿ ಸೆಂಟರ್ಗಳಿಗೆ ದಾಖಲಾಗುವವರ ಪ್ರಮಾಣ ಕಡಿಮೆಯಾಗಿದೆ. ದಿನಕ್ಕೆ 30ಕ್ಕಿಂತಲೂ ಕಡಿಮೆ ಜನರು ಮಾತ್ರ ದಾಖಲಾಗುತ್ತಿದ್ದು, ಎಲ್ಲಾ ಸಿಸಿಸಿ ಕೇಂದ್ರಗಳನ್ನು ಹಳೆಯ ಮಾದರಿಯಲ್ಲಿ ಮುಂದುವರಿಸಲು ಸಾಧ್ಯವಿಲ್ಲ. ಹೀಗಾಗಿ ಆಸ್ಪತ್ರೆಗಳ ಕೋವಿಡ್ ಬೆಡ್ಗಳನ್ನು 13 ಸಾವಿರದಿಂದ 5 ಸಾವಿರಕ್ಕೆ ಇಳಿಸಲಾಗಿದೆ. ಮುಂದಿನ ದಿನಗಳಲ್ಲಿ ಇದನ್ನು 1800 ಹಾಸಿಗೆಗಳಿಗೆ ಇಳಿಸುವ ಪ್ರಸ್ತಾವನೆ ಇದೆ. 30 ಸಿಸಿಸಿ ಸೆಂಟರ್ಗಳನ್ನು 8ಕ್ಕೆ ಕಡಿಮೆ ಮಾಡಲಾಗುವುದು. 200 ರಿಂದ 300 ಬೆಡ್ಗಳನ್ನು ಮುಂದುವರಿಸಿಕೊಂಡು ಹೋಗಲಾಗುವುದು ಎಂದು ತಿಳಿಸಿದರು.
3ನೇ ಅಲೆಯ ಸಲುವಾಗಿ ಬಂದ್ ಮಾಡಿರುವ ಸಿಸಿಸಿ ಸೆಂಟರ್ಗಳನ್ನೇ ಬಳಸಲಾಗುವುದು. ಅಲ್ಲಿರುವ ವ್ಯವಸ್ಥೆ, ಮೂಲಸೌಕರ್ಯ ಹಾಗೇ ಇವೆ. ಪ್ರತಿ ತಿಂಗಳು ಈ ಸಿಸಿಸಿ ಸೆಂಟರ್ಗಳ ನಿರ್ವಹಣೆಗೆ ಒಂದಕ್ಕೆ 4 ಲಕ್ಷ ರೂ. ಖರ್ಚಾಗುತ್ತಿದೆ. ಊಟ, ತಿಂಡಿ ವ್ಯವಸ್ಥೆ, ಸ್ವಚ್ಛತೆ ಕಾರ್ಮಿಕರು ಎಲ್ಲವೂ ನಿರ್ವಹಣೆಯಾಗುತ್ತಿದೆ. ಎರಡು ಮೂರು ತಿಂಗಳು ಇದೇ ರೀತಿ ನಿರ್ವಹಣೆಯಾಗಲಿದೆ ಎಂದರು.