ಆನೇಕಲ್ (ಬೆಂ.ಗ್ರಾ):ಪೆಂಡಾಲ್ ಹಾಕುವ ಸಂದರ್ಭದಲ್ಲಿ 11 ಕೆ.ವಿ. ವಿದ್ಯುತ್ ತಂತಿ ಸ್ಪರ್ಶಿಸಿ ನಾಲ್ವರು ಸಾವನ್ನಪ್ಪಿದ ಘಟನೆ ಇಂಡ್ಲಬೆಲೆಯಲ್ಲಿ ನಡೆದಿದೆ.
ಆನೇಕಲ್ ತಾಲೂಕಿನ ಅತ್ತಿಬೆಲೆ-ಸರ್ಜಾಪುರ ರಸ್ತೆಯ ಇಂಡ್ಲಬೆಲೆ ಬಳಿಯ ನೂತನ ಜಿಆರ್ ಸಂಸ್ಕೃತಿ ಕನ್ಸ್ಟ್ರಕ್ಷನ್ ಬಡಾವಣೆಯ ಉದ್ಘಾಟನಾ ಸಮಾಂರಂಭದ ಪೂರ್ವ ತಯಾರಿ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ವಿದ್ಯುತ್ ತಂತಿ ಸ್ಪರ್ಶಿಸಿ ಕಾರ್ಮಿಕರು ಸಾವು ಅತ್ತಿಬೆಲೆ ಉಷಾಕಿರಣ್ ಟೆಂಟ್ ಹೌಸ್ ಕಾರ್ಮಿಕರಾದ ಆಕಾಶ್ (30), ಹನೂರು ಮೂಲದ ಮಹದೇಶ್ (35), ಟಿ.ನರಸಿಪುರದ ವಿಷಕಂಠ (35) ಮತ್ತು ಜಾರ್ಖಂಡ್ ಮೂಲದ ವಿಜಯಸಿಂಗ್ (30) ಸಾವನ್ನಪ್ಪಿದವರು.
ನೂತನವಾಗಿ ನಿರ್ಮಿಸಲಾಗಿರುವ ಜಿಆರ್ ಸಂಸ್ಕೃತಿ ಅಪಾರ್ಟ್ಮೆಂಟ್ ಉದ್ಘಾಟನಾ ಸಮಾರಂಭ ನಾಳೆಯಿದ್ದು, ಇದಕ್ಕೆ ಸಂಬಂಧಿಸಿದಂತೆ ಶಾಮಿಯಾನ-ಪೆಂಡಾಲ್ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದರು.
ಪೆಂಡಾಲ್ನ ಕಬ್ಬಿಣದ ಸರಳುಗಳಲ್ಲಿ ಜೋತು ಬಿದ್ದಿದ್ದ 11 ಕೆ.ವಿ. ವಿದ್ಯುತ್ ತಂತಿ ಸ್ಪರ್ಶಿಸಿ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮತ್ತಿಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ನಾಲ್ವರು ಗಂಭೀರ ಗಾಯಗಳಿಂದ ನರಳುತ್ತಿದ್ದಾರೆ. ಕೂಡಲೇ ಯಡವನಹಳ್ಳಿ ಆಸ್ಪತ್ರೆಗೆ ಗಾಯಾಳುಗಳನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಸ್ಥಳಕ್ಕೆ ಎಎಸ್ಪಿ ಲಕ್ಷ್ಮಿಗಣೇಶ್, ಸಿಐಕೆ ವಿಶ್ವನಾಥ್ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.