ದೊಡ್ಡಬಳ್ಳಾಪುರ:ರಸ್ತೆ ಒತ್ತುವರಿ ಮಾಡಿಕೊಂಡು ಅನಧಿಕೃತವಾಗಿ ವಾಣಿಜ್ಯ ಮಳಿಗೆ ನಿರ್ಮಿಸಿರುವ ಕುರಿತು ಸಮರ್ಪಕ ಮಾಹಿತಿ ನೀಡುವಲ್ಲಿ ವಿಫಲರಾದ ನಗರಸಭೆಯ ಈ ಹಿಂದಿನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶೇಖ್ ಫಿರೋಜ್ ಅವರಿಗೆ ರಾಜ್ಯ ಮಾಹಿತಿ ಆಯೋಗ 25 ಸಾವಿರ ರೂಪಾಯಿ ದಂಡ ಹಾಕಿದೆ. ಕಾರ್ಯನಿರತ ಪತ್ರಕರ್ತರ ಸಂಘದ ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ಗಂಗರಾಜ ಶಿರವಾರ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ದೊಡ್ಡಬಳ್ಳಾಪುರ ನಗರಸಭೆಯಲ್ಲಿ ಮಾಹಿತಿ ಕೇಳಿದ್ದು, ತೋಟಗಾರಿಕೆ ಇಲಾಖೆ ಸಮೀಪವಿರುವ ಸ್ಮಶಾನ ಪಕ್ಕದ ಸರ್ಕಾರಿ ರಸ್ತೆ ಒತ್ತುವರಿ ಮಾಡಿ, ನಿರ್ಮಿಸಿರುವ ಅನಧಿಕೃತ ಕಟ್ಟಡದ ಕುರಿತು ಮಾಹಿತಿ ಕೇಳಿದ್ದರು. ಆದರೆ ನಗರಸಭೆಯ ಅಂದಿನ ಎಇಇ ಶೇಖ್ ಫಿರೋಜ್ ಮಾಹಿತಿ ನೀಡಿರಲಿಲ್ಲ. ಈ ಬಗ್ಗೆ ಗಂಗರಾಜು ಶಿರವಾರ ಮಾಹಿತಿ ಆಯೋಗಕ್ಕೆ ದೂರು ನೀಡಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಮಾಹಿತಿ ಆಯುಕ್ತ ಎಚ್.ಸಿ.ಸತ್ಯನ್, ಮೂವತ್ತು ದಿನಗಳೊಳಗೆ ದೃಢೀಕೃತ ಮಾಹಿತಿ ಒದಗಿಸುವಂತೆ 2022 ಸೆ.27 ರಂದು ಆದೇಶಿಸಿದ್ದರು. ಆದರೂ ಮಾಹಿತಿ ನೀಡದೇ ಆಯೋಗದ ಆದೇಶ ಉಲ್ಲಂಘಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಆಯೋಗವು ಎಇಇ ಶೇಖ್ ಫಿರೋಜ್ ಅವರಿಗೆ 25 ಸಾವಿರ ರೂಪಾಯಿ ದಂಡ ಕಟ್ಟುವಂತೆ ಸೂಚಿಸಿದೆ.
ದಂಡದ ಹಣವನ್ನು ಅಧಿಕಾರಿಯ ಸಂಬಳದಿಂದಲೇ ಪಾವತಿಸಬೇಕು ಎಂದು ಆಯುಕ್ತರು ನಿರ್ದೇಶನ ನೀಡಿದ್ದಾರೆ. ದೊಡ್ಡಬಳ್ಳಾಪುರ ನಗರಸಭೆ ಎಇಇ ಆಗಿದ್ದ ಶೇಖ್‌ಫಿರೋಜ್ ಅವರು ಪ್ರಸ್ತುತ ಗೌರಿಬಿದನೂರು ನಗರಸಭೆ ಪೌರಾಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅನಧಿಕೃತ ಕಟ್ಟಡದ ಕುರಿತು ಸೂಕ್ತ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಆದೇಶಿಸಲಾಗಿದೆ. ಅಲ್ಲದೇ ಕಟ್ಟಡವು ಅನಧಿಕೃತ ಎಂಬುದು ಸಾಬೀತಾದರೆ ಮಾಲೀಕರ ವಿರುದ್ಧ ಸೂಕ್ತ ಕ್ರಮ ಜರುಗಿಸಿ, ವರದಿ ನೀಡುವಂತೆ ಪೌರಾಡಳಿತ ನಿರ್ದೇಶನಾಲಯಕ್ಕೆ ಮಾಹಿತಿ ಆಯೋಗ ಸೂಚನೆ ನೀಡಿದೆ.