ಬೆಂಗಳೂರು:ಲಾಲ್‌ಬಾಗ್‌ನಲ್ಲಿ ಗಿಡ ಮರಗಳಿಗೆ ನೀರುಣಿಸುವ ಜೊತೆಗೆ ಇಡೀ ಪರಿಸರಕ್ಕೆ ಜೀವಕಳೆ ನೀಡಲು ತೋಟಗಾರಿಕೆ ಇಲಾಖೆ ಮುಂದಾಗಿದೆ. ಉದ್ಯಾನದಲ್ಲಿ ಇಳಿಜಾರು ಪ್ರದೇಶದಲ್ಲಿ ಇಂಗು ಗುಂಡಿ ನಿರ್ಮಿಸಿ ಅಂತರ್ಜಲ ಸಂರಕ್ಷಣೆ ಮಾಡುವ ಮೂಲಕ ಉದ್ಯಾನವನದ ಸಂಪೂರ್ಣ ವಾತಾವರಣ ತಂಪಾಗಿಸಲು ತೋಟಗಾರಿಕೆ ಇಲಾಖೆ ನಿರ್ಧಾರ ಕೈಗೊಂಡಿದೆ.
ಲಾಲ್‌ಬಾಗ್ 240 ಎಕರೆ ಇದ್ದು, ಉತ್ತರ ಭಾಗ ಇಳಿಜಾರು ಪ್ರದೇಶದಿಂದ ಕೂಡಿದೆ. ಮಳೆ ಬಂದಂತಹ ಸಂದರ್ಭದಲ್ಲಿ ದಕ್ಷಿಣ ಭಾಗದಿಂದ ಹರಿದು ಬಂದ ನೀರು ಉತ್ತರ ಭಾಗದಲ್ಲಿ ಶೇಖರಣೆಯಾಗದೆ ಕಾಲುವೆಗಳ ಮುಖಾಂತರ ಹರಿದು ಅಪಾರವಾದ ನೀರು ಪೋಲಾಗುತ್ತಿತ್ತು. ಇದನ್ನು ತಡೆಗಟ್ಟಲು ತೋಟಗಾರಿಕೆ ಇಲಾಖೆ ನೀರು ಪೋಲಾಗುವುದನ್ನ ನಿಯಂತ್ರಿಸಲು ಮಳೆ ನೀರು ಸಂಗ್ರಹಿಸುವ ಸಮಗ್ರ ಅಭಿವೃದ್ಧಿ ಯೋಜನೆ ಕೈಗೆತ್ತಿಕೊಂಡಿದೆ.
ಈ ಯೋಜನೆ ಅನುಷ್ಠಾನಗೊಳಿಸಲು ಯುನೈಟೆಡ್ ವೇ ಆಫ್ ಬೆಂಗಳೂರು ಹಾಗೂ ಬಾಷ್ ಕಂಪನಿಗಳ ಪ್ರಾಯೋಜಕತ್ವದ ಅಡಿ ಲಾಲ್‌ಬಾಗ್ ಆವರಣದಲ್ಲಿ 18X3 ಅಡಿ ಅಳತೆಯ ಒಟ್ಟು 124 ಗುಂಡಿಗಳನ್ನು ನಿರ್ಮಿಸಲಾಗಿದೆ. ಪ್ರತಿ ಗುಂಡಿಯಿಂದ 3600 ಲೀಟರ್ ನೀರನ್ನು ಸಂಗ್ರಹಿಸಬಹುದಾಗಿದೆ. ಒಟ್ಟು 124 ಇಂಗು ಗುಂಡಿಗಳಿಂದ ಸುಮಾರು 4.46 ಲಕ್ಷ ಲೀಟರ್ ನೀರು ಸಂಗ್ರಹಿಸಬಹುದಾಗಿದೆ. ಮುಂದುವರೆದು ತೋಟಗಾರಿಕೆ ಇಲಾಖೆಯಿಂದ 12X4 ಅಡಿ ಅಳತೆಯ 85 ಇಂಗು ಗುಂಡಿಗಳನ್ನು ನಿರ್ಮಿಸಿದ್ದು, ಪ್ರತಿ ಗುಂಡಿಯಿಂದ 4268 ಲೀಟರ್ ಮಳೆ ನೀರು ಸಂಗ್ರಹಿಸಬಹುದಾಗಿದೆ. ಒಟ್ಟು 85 ಇಂಗು ಗುಂಡಿಗಳಿಂದ 3.62 ಲಕ್ಷ ಲೀಟರ್ ನೀರು ಸಂಗ್ರಹಿಸಬಹುದಾಗಿದೆ.