ದೊಡ್ಡಬಳ್ಳಾಪುರ: ಭಾರತ ಪ್ರಜಾಪ್ರಭುತ್ವ ದೇಶ, ಮತದಾನದ ಮಾಡುವುದು ಪ್ರತಿಯೊಬ್ಬ ಪ್ರಜೆಯ ಹಕ್ಕು. ಆದರೆ, ದೊಡ್ಡಬಳ್ಳಾಪುರ ನಗರದ ವಾರ್ಡ್ ನಂಬರ್ 11ರ ಕರೇನಹಳ್ಳಿಯ 1,544 ಮತದಾರರು ನಗರಸಭೆ ಚುನಾವಣೆ ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ.
ಕರೇನಹಳ್ಳಿಯಲ್ಲಿ ಒಟ್ಟು 2,544 ಮತದಾರರಿದ್ದು, 2018 ರಲ್ಲಿ ನಗರಸಭೆ ಅಧಿಕಾರಿಗಳು ಮಾಡಿದ ಮತದಾರರ ಪಟ್ಟಿಯಲ್ಲಿ 1,544 ಜನರ ಹೆಸರನ್ನು ಕೈಬಿಡಲಾಗಿದೆ. ಕರೇನಹಳ್ಳಿಯಿಂದ ಹೊರವಲಯದಲ್ಲಿರುವ ಕುಟುಂಬಗಳನ್ನು ನಗರಸಭೆ ಪಟ್ಟಿಗೆ ಸೇರಿಸಿರುವ ಅಧಿಕಾರಿಗಳು, ಕರೇನಹಳ್ಳಿಯ ಜನರನ್ನ ಮಾತ್ರ ಪಟ್ಟಿಯಿಂದ ಕೈಬಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ 1,544 ಮತದಾರರು ಅರಳುಮಲ್ಲಿಗೆ ಗ್ರಾಮ ಪಂಚಾಯತ್ ಚುನಾವಣೆಯಲ್ಲೂ ಸಹ ಮತದಾನ ಮಾಡುವ ಅವಕಾಶವನ್ನು ಕಳೆದುಕೊಂಡಿದ್ದಾರೆ.
ನಗರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕರೇನಹಳ್ಳಿ ನಿವಾಸಿಗಳು ಕಳೆದ 20 ವರ್ಷಗಳಿಂದ ಮತದಾನ ಮಾಡುತ್ತಿರುವ ಕರೇನಹಳ್ಳಿಯ ನಿವಾಸಿಗಳು, 2007ರಲ್ಲಿ ನಗರಸಭೆ ಚುನಾವಣೆಗೆ ಸಂಬಂಧಿಸಿದಂತೆ ಮೂರು ಬಾರಿ ಮತದಾನ ಮಾಡಿದ್ದಾರೆ. 2013ರಲ್ಲಿ ನಡೆದ ನಗರಸಭೆ ಚುನಾವಣೆಯಲ್ಲೂ ಸಹ ಮತದಾನ ಮಾಡಿದ್ರು. ಆದರೆ ಮುಂಬರುವ ಸೆಪ್ಟೆಂಬರ್ 3 ರಂದು ನಡೆಯುತ್ತಿರುವ ಚುನಾವಣೆಯಲ್ಲಿ 1,544 ಮಂದಿ ಮತದಾನದಿಂದ ವಂಚಿತರಾಗಿರುವುದು ಇಲ್ಲಿನ ನಿವಾಸಿಗಳ ಅಕ್ರೋಶಕ್ಕೆ ಕಾರಣವಾಗಿದೆ.
ಅಷ್ಟೇ ಅಲ್ಲದೆ, 2013 ರಲ್ಲಿ ನಗರಸಭೆ ಚುನಾವಣೆಗೆ ಸ್ಪರ್ಧೆ ಮಾಡಿದ್ದ ಅಭ್ಯರ್ಥಿಗಳ ಹೆಸರನ್ನೇ ಪಟ್ಟಿಯಿಂದ ಕೈಬಿಡಲಾಗಿದೆ. ಈ ಬಾರಿ ನಡೆಯುತ್ತಿರುವ ಚುನಾವಣೆಯಲ್ಲಿ ಹೊರಗಿನ ಅಭ್ಯರ್ಥಿಗಳು ಬಂದು ಸ್ಪರ್ಧೆ ಮಾಡುತ್ತಿರುವುದರ ಹಿಂದೆ ಯಾರದ್ದೋ ಷಡ್ಯಂತ್ರವಿದೆ ಎಂದು ಇಲ್ಲಿನ ಜನ ಆರೋಪಿಸಿದ್ದಾರೆ.
ಇನ್ನು ಮತದಾನದಿಂದ ವಂಚಿತರಾಗಿರುವ 1,544 ಮಂದಿ ಕರೇನಹಳ್ಳಿ ನಾಗರಿಕ ಹಿತರಕ್ಷಣಾ ಸಮಿತಿ ರಚನೆ ಮಾಡಿಕೊಂಡಿದ್ದು, ಹೋರಾಟಕ್ಕೆ ಧುಮುಕಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸುವ ಮೂಲಕ ಅಧಿಕಾರಿಗಳಿಗೆ ಎಚ್ಚರಿಕೆ ನೀಡುವುದಾಗಿ ಹೇಳಿದ್ದಾರೆ.