ಕರ್ನಾಟಕ

karnataka

ETV Bharat / state

ಒಂದೇ ವಾರದಲ್ಲಿ 13 ಜಿಂಕೆ ಸಾವು.. ಬನ್ನೇರುಘಟ್ಟ ಉದ್ಯಾನವನದಲ್ಲಿ ಮತ್ತೊಂದು ದುರಂತ.. - ಸೆಂಟ್ ಜಾನ್ ಆಸ್ಪತ್ರೆ ಬಳಿ ಸಾಕಲಾಗಿದ್ದ 28 ಜಿಂಕೆ

ಬೆಂಗಳೂರಿನ ಹೊರವಲಯದ ಆನೇಕಲ್​ ತಾಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಕಳೆದ ಒಂದೇ ವಾರದಲ್ಲಿ 13 ಜಿಂಕೆಗಳು ಸಾವನ್ನಪ್ಪಿವೆ. ಕೆಲ ದಿನಗಳ ಹಿಂದೆ ಸೋಂಕಿಗೆ ತುತ್ತಾಗಿ 7 ಚಿರತೆಗಳು ಸಾವನ್ನಪ್ಪಿದ್ದವು.

13-deer-died-in-one-week-in-bannerghatta-park
ಬನ್ನೇರುಘಟ್ಟ ಉದ್ಯಾನವನದಲ್ಲಿ ಒಂದು ವಾರದಲ್ಲಿ 13 ಜಿಂಕೆ ಸಾವು

By ETV Bharat Karnataka Team

Published : Sep 20, 2023, 6:43 PM IST

Updated : Sep 20, 2023, 7:45 PM IST

ಒಂದೇ ವಾರದಲ್ಲಿ 13 ಜಿಂಕೆ ಸಾವು.. ಬನ್ನೇರುಘಟ್ಟ ಉದ್ಯಾನವನದಲ್ಲಿ ಮತ್ತೊಂದು ದುರಂತ..

ಆನೇಕಲ್ (ಬೆಂಗಳೂರು ಗ್ರಾಮಾಂತರ): ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ವನ್ಯಜೀವಿಗಳ ಸಾವು ಮುಂದುವರೆದಿದೆ. ಕಳೆದ ಒಂದು ವಾರದಲ್ಲಿ ಬರೋಬ್ಬರಿ 13 ಜಿಂಕೆಗಳು ಸಾವನ್ನಪ್ಪಿವೆ. ಕೆಲ ದಿನಗಳ ಹಿಂದೆಯಷ್ಟೆ ಸೋಂಕಿಗೆ ತುತ್ತಾಗಿದ್ದ 7 ಚಿರತೆಗಳು ರಕ್ತಭೇದಿಯಿಂದ ಸಾವನ್ನಪ್ಪಿದ್ದವು. ಇದರ ಬೆನ್ನಲ್ಲೇ ಜಿಂಕೆಗಳ ಸಾವಿನ ವರದಿಯಾಗಿದೆ.

ನಗರದ ಸೆಂಟ್ ಜಾನ್ ಆಸ್ಪತ್ರೆ ಬಳಿ ಸಾಕಲಾಗಿದ್ದ 28 ಜಿಂಕೆಗಳನ್ನು ಸೂಕ್ತ ಪೋಷಣೆ ಇಲ್ಲವೆಂದು ಬನ್ನೇರುಘಟ್ಟ ಪಾರ್ಕ್​ಗೆ ಹದಿನೈದು ದಿನಗಳ ಹಿಂದೆ ತರಲಾಗಿತ್ತು. ಅದಕ್ಕೂ ಮೊದಲು ಉದ್ಯಾನವನದ ವೈದ್ಯಕೀಯ ತಂಡ ಪರಿಶೀಲನೆ ನಡೆಸಿದ್ದು, ಜಿಂಕೆಗಳು ಆರೋಗ್ಯವಾಗಿದ್ದವು. ಜಂತು ಹುಳ ಔಷಧೋಪಚಾರದ ಜೊತೆಗೆ ಕ್ವಾರಂಟೈನ್ ಬಳಿಕ ಜಿಂಕೆಗಳನ್ನು ಸಫಾರಿಗೆ ಶಿಫ್ಟ್ ಮಾಡಬಹುದು ಎಂದು ವರದಿ ನೀಡಿತ್ತು. ಆದರೆ, ಉದ್ಯಾನವನದ ಸಿಬ್ಬಂದಿ ಒಂದು ವಾರ ಮಾತ್ರ ಕ್ವಾರಂಟೈನ್​​ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

28 ಜಿಂಕೆಗಳಲ್ಲಿ 13 ಜಿಂಕೆಗಳು ಸಾವು: ಹೊರಗಡೆಯಿಂದ ಯಾವುದೇ ಪ್ರಾಣಿಗಳು ಉದ್ಯಾನವನ ಪ್ರವೇಶಿಸಲು ಪ್ರೊಟೋಕಾಲ್ ಇದ್ದು, ಕನಿಷ್ಠ ಒಂದು ತಿಂಗಳು ಕ್ವಾರಂಟೈನ್ ಮಾಡಬೇಕು. ಜೊತೆಗೆ ಯಾವುದೇ ರೋಗ ಇಲ್ಲ ಆರೋಗ್ಯಕರವಾಗಿವೆ ಎಂದ ಬಳಿಕವಷ್ಟೇ ಸಫಾರಿ ಸೇರಿದಂತೆ ಇತರ ಪ್ರಾಣಿಗಳ ಜೊತೆ ಬಿಡಬೇಕು ಎಂಬ ನಿಯಮ ಇದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಉದ್ಯಾನವನದ ಅಧಿಕಾರಿ ಸೂರ್ಯ ಸೇನ್, ಜಿಂಕೆಗಳು ಅತ್ಯಂತ ಸೂಕ್ಷ್ಮ ಜೀವಿಗಳಾಗಿದ್ದು, ಒಂದು ಕಡೆಯಿಂದ ಮತ್ತೊಂದು ಪ್ರದೇಶಕ್ಕೆ ಸಾಗಿಸುವ ಸಂದರ್ಭದಲ್ಲಿ ರೋಗರುಜಿನಗಳಿಗೆ ತುತ್ತಾಗುವ ಅಪಾಯ ಇರುತ್ತದೆ. ಸೇಂಟ್ ಜಾನ್ ಆಸ್ಪತ್ರೆಯ ಉದ್ಯಾನವನದಲ್ಲಿ ಸಾಕಲಾಗಿದ್ದ 28 ಜಿಂಕೆಗಳನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ತರಲಾಗಿತ್ತು. ಈ ಪೈಕಿ 13 ಜಿಂಕೆಗಳು ಸಾವನ್ನಪ್ಪಿವೆ. ಕೆಲವು ಜಿಂಕೆಗಳು ಜಂತುಹುಳ ಬಾಧೆಯಿಂದ ಸಾವನ್ನಪ್ಪಿರುವುದು ಗೊತ್ತಾಗಿವೆ. ಕೆಲವು ಜಿಂಕೆಗಳ ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

10 ದಿನ ಕ್ವಾರಂಟೈನ್​ನಲ್ಲಿ ಇರಿಸಿದ್ದೆವು. ಆದರೆ, ಗಂಡು ಜಿಂಕೆಗಳು ಜಾಸ್ತಿ ಇದ್ದುದ್ದರಿಂದ ಮೇಟಿಂಗ್ ಸೀಸನ್ ಆಗಿರುವುದರಿಂದ ಗುದ್ದಾಡಿ ಕೆಲವು ಸಾವನ್ನಪ್ಪಿವೆ. ಈ ನಡುವೆ ಜಂತುಹುಳ ಸಮಸ್ಯೆಯಿಂದ ಕಳೆದ ಎರಡು ದಿನಗಳಲ್ಲಿ ಮತ್ತೆ ಐದು ಜಿಂಕೆಗಳು ಸಾವನ್ನಪ್ಪಿದ್ದು, ಕಳೆದೊಂದು ವಾರದಲ್ಲಿ 13 ಜಿಂಕೆಗಳು ಮೃತಪಟ್ಟಿವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ :ಬನ್ನೇರುಘಟ್ಟದಲ್ಲಿ ಮಾರಕ ವೈರಸ್‌ಗೆ 7 ಚಿರತೆ ಮರಿಗಳು ಸಾವು: ಉದ್ಯಾನವನದಲ್ಲಿ ಹೈ ಅಲರ್ಟ್

Last Updated : Sep 20, 2023, 7:45 PM IST

ABOUT THE AUTHOR

...view details