ಯಲಹಂಕ (ಬೆಂಗಳೂರು) :ಮತದಾರರಿಗೆ ಹಂಚಲು ಸಂಗ್ರಹಿಸಿಟ್ಟಿದ್ದಾರೆ ಎನ್ನಲಾದ 1,45,152 ರೂಪಾಯಿ ಬೆಲೆಯ 540 ಕುಕ್ಕರ್ಗಳನ್ನು ಯಲಹಂಕ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳ ತಂಡ ಸೀಜ್ ಮಾಡಿದೆ. ದಾಸನಪುರ ಹೋಬಳಿ ಕಡಬಗೆರೆ ಗ್ರಾಮದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಚುನಾವಣಾಧಿಕಾರಿ ಚಂದ್ರಶೇಖರಯ್ಯ ನೇತೃತ್ವದಲ್ಲಿ ಸ್ನೇಹ ಮತ್ತು ಮೋಹನ್ ಕುಮಾರ್ ಅವರಿದ್ದ ತಂಡ ಕಾರ್ಯಾಚರಣೆ ನಡೆಸಿತ್ತು.
ಕಡಬಗೆರೆಯಲ್ಲಿ ಕುಕ್ಕರ್ಗಳ ಸೀಜ್ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನೀತಿ ಸಂಹಿತೆ ಜಾರಿಯಾದ ನಂತರ ಕ್ಷೇತ್ರದಲ್ಲಿ ಇದುವರೆಗೂ 3 ಕೋಟಿ 67 ಲಕ್ಷ ರೂ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಮದ್ಯ, ಬೆಳ್ಳಿ ಆಭರಣ, ಕುಕ್ಕರ್ ಮತ್ತು ಸೀರೆಗಳನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ :ಫ್ಲೈಯಿಂಗ್ ಸ್ಕ್ವಾಡ್ನಿಂದ 19 ಲಕ್ಷ ರೂ. ಮೌಲ್ಯದ ಆಹಾರ ಪದಾರ್ಥ ವಶ: ವಿಜಯನಗರ ಜಿಲ್ಲೆಯ ವಿವಿಧೆಡೆ ನಗದು, ಬಂಗಾರ ವಶ
"16,795 ಲೀಟರ್ ಮದ್ಯ ವಶಕ್ಕೆ ಪಡೆದು ಹೆಚ್ಚಿನ ತನಿಖೆ ಮುಂದುವರೆಸಲಾಗಿದೆ. 31 ಸೆಕ್ಟರ್ ಅಧಿಕಾರಿಗಳ ತಂಡ ಕ್ಷೇತ್ರದ ಐದು ಚೆಕ್ ಪೋಸ್ಟ್ಗಳಲ್ಲಿ ಚೆಕ್ಕಿಂಗ್ ಮುಂದುವರೆಸಿದೆ. ಅಳ್ಳಾಳಸಂದ್ರ, ನಾಗೇನಹಳ್ಳಿ ಗೇಟ್, ರಾಜಾನುಕುಂಟೆ ಫ್ಲೈಓವರ್, ಹೆಸರಘಟ್ಟ ಮತ್ತು ಕಡಬಗೆರೆಯ ಚೆಕ್ ಪೋಸ್ಟ್ಗಳಲ್ಲಿ ಅಧಿಕಾರಿಗಳ ತಂಡ ಚೆಕ್ಕಿಂಗ್ ಮುಂದುವರೆಸಿದ್ದಾರೆ" ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.