ಬಾಗಲಕೋಟೆ: ಕನ್ನಡದ ಕೋಟ್ಯಧಿಪತಿಯಲ್ಲಿ ಭಾಗವಹಿಸಿದ್ದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಹೆಸ್ಕಾಂ ಲೈನ್ಮನ್ ಆಗಿದ್ದ ತಿಮ್ಮಣ್ಣ ಗುರಡ್ಡಿ (27) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಯುವಕ ಎಂದು ತಿಳಿದು ಬಂದಿದೆ. ಸಾಲದ ಹೊರೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಮುಧೋಳ ತಾಲೂಕಿನ ಮಂಟೂರ ವ್ಯಾಪ್ತಿಯ ತೋಟದ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ. ಸೋಮವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ:ವಿವಾಹ ನೋಂದಣಿ ಕಚೇರಿ ಸಮೀಪಿಸುತ್ತಿದ್ದಂತೆ ಯುವಕ ಪರಾರಿ.. ಪ್ರೀತಿಸಿದಾಕೆ ಕಂಗಾಲು!
ನಟ ರಮೇಶ್ ಅರವಿಂದ ನಡೆಸಿಕೊಡುತ್ತಿದ್ದ ಕನ್ನಡದ ಕೋಟ್ಯಧಿಪತಿಯಲ್ಲಿ ಈ ಯುವಕ ಭಾಗವಹಿಸಿದ್ದ. ಎಸ್ಎಸ್ಎಲ್ಸಿ ಓದಿದ್ದ ತಿಮ್ಮಣ್ಣ ಕನ್ನಡದ ಕೋಟ್ಯಧಿಪತಿಯಲ್ಲಿ 6.40 ಲಕ್ಷ ರೂ. ಗೆದ್ದಿದ್ದ. ಟಿಕ್ಟಾಕ್, ಹಾಸ್ಯ, ಸಂಗೀತದ ಮೂಲಕ ಅಭಿಮಾನಿ ಬಳಗ ಹೊಂದಿದ್ದ. ಅಲ್ಲದೇ ಕ್ರೀಡಾಪಟು ಸಹ ಆಗಿದ್ದ. ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದ ತಂದೆಯ ಚಿಕಿತ್ಸೆ ಹಣ ಸಂಗ್ರಹಿಸಿದ್ದನಂತೆ. ಅಲ್ಲದೇ ಹೊಸ ಮನೆ ಕಟ್ಟಿಸುವ ಸಲುವಾಗಿ ಸಾಲ ಸಹ ಮಾಡಿಕೊಂಡಿದ್ದನಂತೆ. ಆ ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ.